ADVERTISEMENT

ಪ್ರೀ ಕ್ವಾರ್ಟರ್‌ ಮೇಲೆ ಜಪಾನ್–ಸೆನೆಗಲ್ ಕಣ್ಣು

ಏಜೆನ್ಸೀಸ್
Published 23 ಜೂನ್ 2018, 18:27 IST
Last Updated 23 ಜೂನ್ 2018, 18:27 IST
ಸೆನೆಗಲ್ ತಂಡದ ಸ್ಯಾಡಿಯೊ ಮಾನೆ ಮತ್ತು ಜಪಾನ್‌ನ ಮಯಾ ಯೊಶಿಡಾ ಭಾನುವಾರದ ಪಂದ್ಯದಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ ಎಎಫ್‌ಪಿ ಚಿತ್ರ
ಸೆನೆಗಲ್ ತಂಡದ ಸ್ಯಾಡಿಯೊ ಮಾನೆ ಮತ್ತು ಜಪಾನ್‌ನ ಮಯಾ ಯೊಶಿಡಾ ಭಾನುವಾರದ ಪಂದ್ಯದಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ ಎಎಫ್‌ಪಿ ಚಿತ್ರ   

ಎಕಟೆರಿನ್‌ಬರ್ಗ್‌:ಏಷ್ಯಾ ಖಂಡದ ಭರವಸೆ ಜಪಾನ್ ಮತ್ತು ಆಫ್ರಿಕಾ ಖಂಡದ ಬೆಳಕಿನ ಕಿರಣ ಸೆನೆಗಲ್ ತಂಡಗಳು ಭಾನುವಾರ ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ‘ಎಚ್‌’ ಗುಂಪಿನ ಈ ಪಂದ್ಯ ಗೆಲ್ಲುವ ತಂಡಕ್ಕೆ 16ರ ಘಟ್ಟ ಪ್ರವೇಶಿಸುವ ಹಾದಿ ಸುಗಮವಾಗಲಿದೆ. ಆದ್ದರಿಂದ ಎರಡೂ ತಂಡಗಳು ಜಯದ ಕನಸು ಕಾಣುತ್ತಿವೆ.

ಮೊದಲ ‍ಪಂದ್ಯದಲ್ಲಿ ಜಪಾನ್‌ 2–1ರಿಂದ ಕೊಲಂಬಿಯಾವನ್ನು ಮಣಿಸಿದ್ದರೆ, ಸೆನೆಗಲ್‌ 2–1 ಗೋಲುಗಳಿಂದ ಪೋಲೆಂಡ್ ಎದುರು ಗೆದ್ದಿತ್ತು. ಕೊಲಂಬಿಯಾವನ್ನು ಮಣಿಸಿದ ಜಪಾನ್‌ಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಕೋಚ್ ಅಕಿರಾ ನಿಶಿನೊ ಅವರನ್ನು ಕೂಡ ಜಪಾನ್ ಜನತೆ ಅಭಿನಂದಿಸಿದ್ದರು. ಇದು ಈ ತಂಡದ ಭರವಸೆಯನ್ನು ಹೆಚ್ಚಿಸಿದೆ.

2002ರಲ್ಲಿ ಮೊದಲ ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಸೆನೆಗಲ್ ಆ ವರ್ಷ ಅಮೋಘವಾಗಿ ಆಡಿತ್ತು. ನಂತರ ಮೂರು ಬಾರಿ ಅರ್ಹತೆ ಗಳಿಸಲಿಲ್ಲ. ಈಗ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದ್ದು ಆರಂಭದಲ್ಲೇ ಗಳಿಸಿದ ಜಯದಿಂದ ತಂಡ ಪುಳಕಗೊಂಡಿದೆ. ಹೀಗಾಗಿ 2002ರ ವೈಭವವನ್ನು ಮರುಕಳಿಸುವ ವಿಶ್ವಾಸದಲ್ಲಿದೆ.

ADVERTISEMENT

ಕಳೆದ ಪಂದ್ಯದಲ್ಲಿ ಕಣಕ್ಕೆ ಇಳಿಸಿದ ತಂಡವನ್ನೇ ಭಾನುವಾರವೂ ಆಡಿಸಲು ಜಪಾನ್ ಕೋಚ್ ಅಕಿರಾ ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಕೆಸುಕೆ ಹೊಂಡಾ ಮತ್ತೊಮ್ಮೆ ಬೆಂಚು ಕಾಯುವ ಸಾಧ್ಯತೆ ಇದೆ. ರಕ್ಷಣಾ ವಿಭಾಗದಲ್ಲಿ ಮಯಾ ಯೊಶಿಡಾ ಅವರಿಗೆ ಜೊತೆ ನೀಡಲು ಡೆನ್ ಶೋಜಿ ಅವರಿದ್ದಾರೆ.

ಆದರೆ ಶಿಸ್ತುಬದ್ಧ, ಉತ್ಸಾಹಭರಿತ ಆಟಕ್ಕೆ ಹೆಸರಾಗಿರುವ ಸೆನೆಗಲ್‌ ತಂಡಕ್ಕೆ ಜಪಾನ್‌ ಸಾಟಿಯಾಗುವುದೇ ಎಂಬುದು ಫುಟ್‌ಬಾಲ್ ಪ್ರೇಮಿಗಳಲ್ಲಿ ಉಳಿದಿರುವ ಪ್ರಶ್ನೆ. ಸಂಘಟಿತ ಹೋರಾಟವೇ ತಂಡದ ಶಕ್ತಿ ಎಂದು ಜಪಾನ್ ಕೋಚ್ ಹೇಳಿದ್ದಾರೆ.

ಜನಾಂಗೀಯ ನಿಂದನೆಯ ಟ್ವೀಟ್‌ನ ಪ್ರೇರಣೆ?
ಮೊದಲ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿರುವ ಸೆನೆಗಲ್‌ ತಂಡ ಜನಾಂಗೀಯ ನಿಂದನೆಗೆ ಒಳಗಾಗಿದೆ. ಇದರಿಂದ ಬೇಸರಗೊಳ್ಳದ ತಂಡದ ಆಟಗಾರರು ಜಪಾನ್ ವಿರುದ್ಧ ಗೆದ್ದು ತಕ್ಕ ಉತ್ತರ ನೀಡುವ ಛಲದಲ್ಲಿದ್ದಾರೆ.

ಅಲನ್‌ ಸುಗರ್‌ ಎಂಬ ಉದ್ಯಮಿಯೊಬ್ಬರು ಸೆನೆಗಲ್‌ ತಂಡದ ಆಟಗಾರರ ಚಿತ್ರ ಪ್ರಕಟಿಸಿ ನಿಂದನೆ ಮಾಡುವ ಧಾಟಿಯಲ್ಲಿ ಟ್ವೀಟ್ ಮಾಡಿದ್ದರು. ಇದು ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ.

ವಿವಾದ ಆದ ನಂತರ ಟ್ವೀಟ್‌ ಅನ್ನು ಅಳಿಸಿ ಹಾಕಿರುವ ಉದ್ಯಮಿ ಕ್ಷಮೆಯನ್ನೂ ಕೋರಿದ್ದಾರೆ. ಆದರೆ ಸೆನೆಗಲ್‌ ತಂಡದವರು ಅವಮಾನಕ್ಕೆ ‘ತಕ್ಕ ಉತ್ತರ’ ನೀಡಲು ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.