ಬೆಂಗಳೂರು: ಭಾರತ ಮತ್ತು ಸಿಂಗಪುರ ನಡುವೆ ಅಕ್ಟೋಬರ್ 14ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ 2027ರ ಕ್ವಾಲಿಫೈಯರ್ ಪಂದ್ಯದ ಆತಿಥ್ಯದ ಅವಕಾಶವನ್ನು ಕಂಠೀರವ ಕ್ರೀಡಾಂಗಣ ಕಳೆದುಕೊಂಡಿದೆ. ಈ ಕ್ರೀಡಾಂಗಣದ ಹುಲ್ಲಿನಂಕಣ ಮತ್ತಿತರ ಸೌಲಭ್ಯಗಳ ಕೊರತೆಯ ಕಾರಣಕ್ಕೆ ಏಷ್ಯನ್ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ) ಅನುಮತಿ ನಿರಾಕರಿಸಿದೆ.
ಭಾರತ ಪುರುಷರ ತಂಡವು ಗುಂಪು ಹಂತದ ಪಂದ್ಯದಲ್ಲಿ ಸಿಂಗಪುರ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಕಂಠೀರವ ಕ್ರೀಡಾಂಗಣವನ್ನು ಎಎಫ್‌ಸಿಗೆ ಶಿಫಾರಸು ಮಾಡಿತ್ತು. ಅದನ್ನು ಎಎಫ್‌ಸಿ ತಿರಸ್ಕರಿಸಿರುವ ಕಾರಣ ಪರ್ಯಾಯ ತಾಣಕ್ಕೆ ಹುಡುಕಾಟ ನಡೆಯುತ್ತಿದೆ.
ನೈಸರ್ಗಿಕ ಪಿಚ್ ಸೇರಿದಂತೆ ಕಂಠೀರವ ಕ್ರೀಡಾಂಗಣದಲ್ಲಿ ಹಲವು ಸೌಲಭ್ಯಗಳ ಕೊರತೆಯಿದೆ. ಹೀಗಾಗಿ, ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಈ ತಾಣ ಅನುಕೂಲಕರವಾಗಿಲ್ಲ ಎಂದು ಕ್ರೀಡಾಂಗಣ ಪರಿಶೀಲನೆಗೆ ಬಂದಿದ್ದ ಸಮಿತಿಯು ಎಎಫ್‌ಸಿಗೆ ವರದಿ ಮಾಡಿತ್ತು ಎನ್ನಲಾಗಿದೆ.
ಸಾಮಾನ್ಯವಾಗಿ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಬೆಂಗಳೂರು ಎಫ್‌ಸಿ ತಂಡವು ತಮ್ಮ ಪಂದ್ಯಗಳಿಗೆ ತವರಿನ ಕ್ರೀಡಾಂಗಣದ ಸುಸ್ಥಿತಿಗೆ ಮುತುವರ್ಜಿ ವಹಿಸುತ್ತಿತ್ತು. ಆದರೆ ಈ ಬಾರಿ ಐಎಸ್‌ಎಲ್ ಅನಿಶ್ಚಿತತೆಯಿಂದ ಕೂಡಿರುವ ಕಾರಣ, ಬಿಎಫ್‌ಸಿ ಈ ಬಾರಿ ಆಸಕ್ತಿ ಹೊಂದಿಲ್ಲ.
ಗೋವಾ ಮತ್ತು ಶಿಲ್ಲಾಂಗ್ ತಾಣಗಳು ಎಐಎಫ್‌ಎಫ್ ಮುಂದಿರುವ ಆಯ್ಕೆಗಳಾಗಿವೆ. ಶಿಲ್ಲಾಂಗ್‌ನಲ್ಲಿ ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧ ಏಷ್ಯನ್ ಕಪ್ ಅಂತಿಮ ಸುತ್ತಿನ ಅರ್ಹತಾ ಪಂದ್ಯವನ್ನು ಭಾರತ ಆಡಿತ್ತು. ಡುರಾಂಡ್ ಕಪ್‌ನ ಗುಂಪು ಹಂತದ ಪಂದ್ಯಗಳೂ ಅಲ್ಲಿ ನಡೆದಿದ್ದವು. ಗೋವಾದಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಕ್ವಾಲಿಫೈಯರ್ ಪಂದ್ಯಗಳು ನಡೆದಿವೆ.
ಖಾಲಿದ್ ಜಮೀಲ್ ಅವರು ಭಾರತ ಫುಟ್‌ಬಾಲ್ ತಂಡದ ಕೋಚ್ ಆಗಿ ಈಚೆಗೆ ನೇಮಕಗೊಂಡಿದ್ದು, ಸಿಂಗಪುರ ವಿರುದ್ಧದ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್ ಅವರಿಗೆ ಮೊದಲ ಸವಾಲಾಗಿದೆ. ನಾಲ್ಕು ತಂಡಗಳಿರುವ ಸಿ ಗುಂಪಿನಲ್ಲಿ ಭಾರತ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಮತ್ತೊಂದರಲ್ಲಿ ಡ್ರಾ ಸಾಧಿಸಿ 1 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಸಿಂಗಪುರ ತಂಡವು 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.