ಬೆಂಗಳೂರು: ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಉಪಾಧ್ಯಕ್ಷರೂ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಡಳಿತ ಸಮಿತಿ ಸದಸ್ಯರೂ ಆಗಿದ್ದ ಎಂ.ಮೋಹನ್‌ರಾಜ್ (89) ನಗರದ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಶಾಲಾ ಹಂತದಲ್ಲೇ ಫುಟ್‌ಬಾಲ್ ಆಡಲು ಆರಂಭಿಸಿದ್ದ ಮೋಹನ್‌ರಾಜ್ ವಿಶ್ವವಿದ್ಯಾಲಯ ಮಟ್ಟದಲ್ಲೂ ಮಿಂಚಿದ್ದರು. ನಂತರ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದ್ದರು. ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಅವರುನಿವೃತ್ತಿ ಸಂದರ್ಭದಲ್ಲಿ ಆಡಿಟ್ ಜನರಲ್ ಕಚೇರಿಯಲ್ಲಿ ಸಹಾಯಕ ಕ್ಷೇಮಾಭಿವೃದ್ಧಿ ಅಧಿಕಾರಿಯಾಗಿದ್ದರು. ಕರ್ನಾಟಕ ವಿದ್ಯಾಶಾಲೆ ಮತ್ತು ಸೇಂಟ್ ಜಾನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ರಾಜ್ಯ ಫುಟ್‌ಬಾಲ್ ತಂಡ, ಒಲಿಂಪಿಕ್ಸ್‌ಗೆ ಸಿದ್ಧವಾಗುತ್ತಿದ್ದ ಭಾರತ ತಂಡ ಮತ್ತು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಿದ ತಂಡದ ವ್ಯವಸ್ಥಾಪಕರಾಗಿದ್ದರು. ದೆಹಲಿಯಲ್ಲಿ 1982ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ತಾಂತ್ರಿಕ ಸಮಿತಿ ಸದಸ್ಯರಾಗಿದ್ದರು. ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದ ಅವರು ರಾಜ್ಯ ಫುಟ್‌ಬಾಲ್ ಕ್ಷೇಮಾಭಿವೃದ್ಧಿ ಟ್ರಸ್ಟ್ ಸ್ಥಾಪಕರಲ್ಲಿ ಪ್ರಮುಖರಾಗಿದ್ದರು.
ಅಂತ್ಯಕ್ರಿಯೆ ಹೆಬ್ಬಾಳ ಸ್ಮಶಾನದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಪುತ್ರಿಯ ಸಂಪರ್ಕ ಸಂಖ್ಯೆ–7624895125.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.