
ಬೆಂಗಳೂರು: ನಾಯಕ ನಿಖಿಲ್ ರಾಜ್ ಮುರುಗೇಶ್ ಅವರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ‘ಸಂತೋಷ್ ಟ್ರೋಫಿ’ಗಾಗಿ ನಡೆಯುತ್ತಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ 3–0ಯಿಂದ ಲಕ್ಷದ್ವೀಪ ತಂಡವನ್ನು ನಿರಾಯಾಸವಾಗಿ ಮಣಿಸಿ ಶುಭಾರಂಭ ಮಾಡಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನ ‘ಎಚ್’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಫುಟ್‌ಬಾಲ್ ಕ್ಲಬ್ ತಂಡದ ನಿಖಿಲ್ 8ನೇ ಮತ್ತು 43ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಕಾರ್ತಿಕ್ ಗೋವಿಂದ್ ಸ್ವಾಮಿ ಮತ್ತೊಂದು ಗೋಲನ್ನು (90+3ನೇ) ತಂದಿತ್ತರು.
ರವಿಬಾಬು ರಾಜು ಮಾರ್ಗದರ್ಶನದ ಆತಿಥೇಯ ತಂಡವು ಎಂಟನೇ ನಿಮಿಷದಲ್ಲೇ ಮುನ್ನಡೆ ಪಡೆಯಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಿಖಿಲ್ ಅವರು ಎದುರಾಳಿ ಗೋಲ್‌ಕೀಪರ್ ಮೊಹಮ್ಮದ್ ಸಮೀರ್ ಶೇಕ್ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು.
ಮೊದಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಂತೆ ಬೆಂಗಳೂರು ಎಫ್‌ಸಿ ತಂಡ ಪ್ರತಿಭೆ ಸಿ.ರೋಹನ್ ಸಿಂಗ್ ಅವರು ನೀಡಿದ ಪಾಸ್‌ನಲ್ಲಿ ನಿಖಿಲ್ ಮತ್ತೊಂದು ಗೋಲು ದಾಖಲಿಸಿ, ತಂಡದ ಮೊತ್ತವನ್ನು ದ್ವಿಗುಣಗೊಳಿಸಿದರು.
ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟದ ಮೊರೆ ಹೋದವು. ಆದರೆ, ಇಂಜುರಿ ಅವಧಿಯಲ್ಲಿ ಕಾರ್ತಿಕ್ ಅಮೋಘವಾಗಿ ಗೋಲು ಗಳಿಸಿ, ಕರ್ನಾಟಕದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಕರ್ನಾಟಕ ತಂಡವು ಸೋಮವಾರ ಸರ್ವಿಸಸ್ ತಂಡವನ್ನು ಎದುರಿಸಲಿದೆ.
ಸರ್ವಿಸಸ್‌ಗೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡವು 4–0ಯಿಂದ ಗೋವಾ ತಂಡವನ್ನು ಮಣಿಸಿತು. ಗೋವಾ ಪರ ಅಭಿಷೇಕ್ ಪವಾರ್ (59ನೇ ಮತ್ತು 64ನೇ) ಎರಡು ಗೋಲು ಗಳಿಸಿದರೆ, ರೋಶನ್ ಪನ್ನಾ (67ನೇ) ಮತ್ತು ವಿಜಯ್ ಜೆ. (69ನೇ) ತಲಾ ಒಂದು ಗೋಲು ದಾಖಲಿಸಿದರು.
ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರ ಗುರುಪ್ರೀತ್ ಸಿಂಗ್, ಡಿಐಜಿಪಿ (ಆಡಳಿತ) ಯಡಾ ಮಾರ್ಟಿನ್, ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಎಂ. ಕುಮಾರ್ ಅವರು ಪಂದ್ಯ ಆರಂಭಕ್ಕೂ ಮುನ್ನ ತಂಡಗಳನ್ನು ಪರಿಚಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.