ADVERTISEMENT

ಖನ್ನೂರು ಕ್ರೀಡಾ ಅಕಾಡೆಮಿಗೆ ಬುನಾದಿ ಪುತ್ರನ ಕ್ರೀಡಾಪ್ರೇಮ!

ರಾಣೆಬೆನ್ನೂರು, ಹುಬ್ಬಳ್ಳಿಯಲ್ಲಿ ತರಬೇತಿ; ಉತ್ತರ ಕರ್ನಾಟಕದ ಐದು ಕಡೆಗೆ ವಿಸ್ತರಿಸುವ ಚಿಂತನೆ

ವಿಕ್ರಂ ಕಾಂತಿಕೆರೆ
Published 17 ಆಗಸ್ಟ್ 2020, 19:30 IST
Last Updated 17 ಆಗಸ್ಟ್ 2020, 19:30 IST
ಖನ್ನೂರು ಸ್ಪೋರ್ಟ್ಸ್‌ ಅಕಾಡೆಮಿ ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಹಸಿರು ಅಂಗಣದಲ್ಲಿ ಫುಟ್‌ಬಾಲ್‌ ಅಭ್ಯಾಸದಲ್ಲಿ ನಿರತರಾಗಿರುವ ಕ್ರೀಡಾಪಟುಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಖನ್ನೂರು ಸ್ಪೋರ್ಟ್ಸ್‌ ಅಕಾಡೆಮಿ ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಹಸಿರು ಅಂಗಣದಲ್ಲಿ ಫುಟ್‌ಬಾಲ್‌ ಅಭ್ಯಾಸದಲ್ಲಿ ನಿರತರಾಗಿರುವ ಕ್ರೀಡಾಪಟುಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   

ಬೆಂಗಳೂರು: ಮಗನ ಮನದಲ್ಲಿ ಮಡುಗಟ್ಟಿದ್ದ ಕ್ರೀಡಾಸ್ಫೂರ್ತಿಗೆ ತಣ್ಣೀರು ಹಾಕಿದ ಪಾಲಕರು ವರ್ಷಗಳ ನಂತರ ಅದರ ಪಶ್ಚಾತ್ತಾಪದಿಂದ ಸ್ಥಾಪಿಸಿದ ಕ್ರೀಡಾ ಅಕಾಡೆಮಿ ಉತ್ತರ ಕರ್ನಾಟಕದಲ್ಲಿ ಯುವ ಪೀಳಿಗೆಗೆ ಫುಟ್‌ಬಾಲ್ ತರಬೇತಿ ನೀಡುತ್ತಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಖನ್ನೂರು ಸ್ಪೋರ್ಟ್ಸ್ ಅಕಾಡೆಮಿ ರಾಣೆಬೆನ್ನೂರಿನಲ್ಲೂ ಹುಬ್ಬಳ್ಳಿಯಲ್ಲೂ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸ್ಥಾಪಸಿದ್ದು ರಾಣೆಬೆನ್ನೂರಿನ ಖನ್ನೂರು ಕುಟುಂಬದ ವೈದ್ಯ ದಂಪತಿ ಪ್ರವೀಣ್ ಮತ್ತು ಶೈಲಶ್ರೀ.

ಅಕಾಡೆಮಿ ಸ್ಥಾಪನೆಗೆ ಕಾರಣವನ್ನು ಡಾ.ಶೈಲಶ್ರೀ ಅವರು ‘ಪ್ರಜಾವಾಣಿ‘ಗೆ ವಿವರಿಸಿದ್ದು ಹೀಗೆ: ‘ಮಗ ಅನುರಾಗ್‌ಗೆ ಕ್ರೀಡೆಯಲ್ಲಿ ಸಾಧನೆ ಮಾಡುವ ಆಸೆ ಇತ್ತು. ಒಂಬತ್ತನೇ ತರಗತಿಯಲ್ಲಿದ್ದಾಗ ಫುಟ್‌ಬಾಲ್ ಆಡುವ ಇಚ್ಛೆ ವ್ಯಕ್ತಪಡಿಸಿದ. ಆದರೆ ಯಾವುದೋ ಯೋಚನೆಯಲ್ಲಿ ನಾವು ಬೇಡ ಎಂದೆವು. ಆತನನ್ನು ಆ ನೋವು ಕಾಡುತ್ತಿತ್ತು. ಕಾಲೇಜಿಗೆ ಹೋಗಲು ಆರಂಭಿಸಿದ ನಂತರ ಕ್ರೀಡಾಕೂಟಗಳನ್ನು ಆಯೋಜಿಸಲು ತೊಡಗಿದ; ಜನರ ಮೆಚ್ಚುಗೆ ಗಳಿಸಿದ. ಇದನ್ನು ಕಂಡು ನಮಗೆ ಪಶ್ಚಾತ್ತಾಪವಾಯಿತು. ಅಂದೇ ಆತನನ್ನು ಆಡಲು ಬಿಡಬೇಕಿತ್ತು ಎಂದುಕೊಂಡೆವು. ಕಾಲ ಮಿಂಚಿಹೋಗಿತ್ತು. ಆತನ ಮನದ ಆಸೆಯನ್ನು ಬೇರೆ ಮಕ್ಕಳ ಮೂಲಕ ಈಡೇರಿಸುವ ಆಲೋಚನೆ ಮೂಡಿತು. ಹಾಗೆ ಹುಟ್ಟಿಕೊಂಡದ್ದು ಖನ್ನೂರು ಸ್ಪೋರ್ಟ್ಸ್ ಅಕಾಡೆಮಿ...’

ADVERTISEMENT

‘2018ರಲ್ಲಿ ಕಾಲೇಜು ಸೇರಿದಾಗ ಹರಿಹರದ ಕೋಚ್ ಪ್ರವೀಣ್ ಸಿ.ಎಂ ಅವರ ಜೊತೆಗೂಡಿ ಮಗ ಟೂರ್ನಿಯೊಂದನ್ನು ಆಯೋಜಿಸಿದ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಎಂಟು ತಂಡಗಳು ಪಾಲ್ಗೊಂಡಿದ್ದವು. ಮಗನ ಕ್ರೀಡಾಪ್ರೇಮದಿಂದ ಸ್ಫೂರ್ತಿಗೊಂಡ ನಾವು ಕಳೆದ ವರ್ಷ ಫುಟ್‌ಬಾಲ್‌, ಬ್ಯಾಡ್ಮಿಂಟನ್‌ನಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಂಡೆವು. ನಂತರ ನಮ್ಮ ಪಶ್ಚಾತ್ತಾಪಕ್ಕೆ ಸಾಂಸ್ಥಿಕ ರೂಪ ನೀಡುವುದಕ್ಕಾಗಿ ಅಕಾಡೆಮಿ ಸ್ಥಾಪಿಸಿದೆವು. ರಾಣೆಬೆನ್ನೂರಿನ ಖನ್ನೂರು ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಫುಟ್‌ಬಾಲ್ ಅಂಗಣ ನಿರ್ಮಿಸಿದೆವು. ನಂತರ ಹುಬ್ಬಳ್ಳಿಗೂ ಚಟುವಟಿಕೆ ವಿಸ್ತರಿಸಲಾಯಿತು. ಈಗ ಅಕಾಡೆಮಿಯನ್ನು ಮಗನೇ ನೋಡಿಕೊಳ್ಳುತ್ತಿದ್ದಾನೆ‘ ಎಂದು ಶೈಲಶ್ರೀ ತಿಳಿಸಿದರು.

ರಾಣೆಬೆನ್ನೂರಿನ ಮಣ್ಣಿನ ಅಂಗಣದಲ್ಲಿ ಬಾಲಕಿಯರೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗುತ್ತಿದೆ. ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯ ಸಮೀಪದ ಖಾಲಿ ಜಮೀನಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಹಸಿರು ಅಂಗಣ ನಿರ್ಮಿಸಲಾಗಿದ್ದು 13 ಮಂದಿಗೆ ತರಬೇತಿ ನೀಡಲಾಗುತ್ತಿದೆ.

‘ಉತ್ತರ ಕರ್ನಾಟಕದ ಕನಿಷ್ಠ ಐದು ನಗರಗಳಿಗೆ ಅಕಾಡೆಮಿಯ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶವಿದೆ. 16 ವರ್ಷದೊಳಗಿನವರಲ್ಲಿ ಫುಟ್‌ಬಾಲ್ ಕೌಶಲ ತುಂಬಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ವಿದೇಶದ ಕೆಲವು ರಾಷ್ಟ್ರಗಳಲ್ಲಿ ಸಣ್ಣವರಿದ್ದಾಗಲೇ ಮಕ್ಕಳನ್ನು ಫುಟ್‌ಬಾಲ್ ಅಂಗಣಕ್ಕೆ ಕಳುಹಿಸುತ್ತಾರೆ. ನಮ್ಮಲ್ಲಿ ಮಕ್ಕಳು ಆಸೆ ವ್ಯಕ್ತಪಡಿಸಿದರೂ ಬೈದು, ಹೊಡೆದು ಸುಮ್ಮನಾಗಿಸುತ್ತಾರೆ. ಈ ಪರಿಸ್ಥಿತಿ ಇಲ್ಲದಾಗಬೇಕು’ ಎಂಬುದು ನನ್ನ ಆಶಯ ಎಂದು ಅನುರಾಗ್ ಹೇಳಿದರು.

ಪ್ರೀಮಿಯರ್ ಲೀಗ್‌, ಐಎಸ್‌ಎಲ್‌ ಸ್ಫೂರ್ತಿ

ಇಂಗ್ಲೆಂಡ್‌ನ ಪ್ರೀಮಿಯರ್ ಲೀಗ್ ಮತ್ತು ಭಾರತದ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಗಳು ಫುಟ್‌ಬಾಲ್‌ ಮೇಲೆ ಹೆಚ್ಚು ಆಸಕ್ತಿ ಮೂಡಲು ಕಾರಣ ಎನ್ನುತ್ತಾರೆ ಅನುರಾಗ್ ಖನ್ನೂರು.

‘ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಇತ್ತು. ಆದರೆ ಪಿಎಲ್ ಮತ್ತು ಐಎಸ್‌ಎಲ್‌ ನೋಡಿದ ನಂತರ ಫುಟ್‌ಬಾಲ್‌ ಮೇಲೆ ಪ್ರೀತಿ ಬೆಳೆಯಿತು. ನನಗೆ ಸಣ್ಣ ವಯಸ್ಸಿನಲ್ಲಿ ಆಡಲು ಅವಕಾಶ ಸಿಗಲಿಲ್ಲ. ಅಕಾಡೆಮಿಯಲ್ಲಿ ತರಬೇತಿ ನೀಡುವ ಮೂಲಕ ಆ ನೋವನ್ನು ಈಗ ಮರೆತಿದ್ದೇನೆ. ರಾಣೆಬೆನ್ನೂರಿನಲ್ಲಿ ‘ಡಿ’ ಮತ್ತು ‘ಇ’ ಲೈಸೆನ್ಸ್ ಹೊಂದಿರುವ ಇಬ್ಬರು ತರಬೇತಿ ನೀಡುತ್ತಿದ್ದಾರೆ. ಹುಬ್ಬಳ್ಳಿಯ ಕೋಚ್ ‘ಇ’ ಲೈಸೆನ್ಸ್‌ನ ಅಂತಿಮ ಘಟ್ಟದಲ್ಲಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.