ADVERTISEMENT

ಐಎಸ್‌ಎಲ್‌: ಚೆನ್ನೈಯಿನ್‌ಗೆ ಎಸ್‌ಸಿ ಈಸ್ಟ್ ಬೆಂಗಾಲ್ ಸವಾಲು

ಪಿಟಿಐ
Published 17 ಜನವರಿ 2021, 15:21 IST
Last Updated 17 ಜನವರಿ 2021, 15:21 IST
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು ಅಭ್ಯಾಸ ನಡೆಸಿದ ಸಂದರ್ಭ –ಐಎಸ್‌ಎಲ್ ಮೀಡಿಯಾ ಚಿತ್ರ
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು ಅಭ್ಯಾಸ ನಡೆಸಿದ ಸಂದರ್ಭ –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡ, ಗೋವಾ: ಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡಕ್ಕೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಚೆನ್ನೈಯಿನ್ ಎಫ್‌ಸಿ ಸವಾಲೊಡ್ಡಲಿದೆ. ಅಜೇಯ ಓಟ ಮುಂದುವರಿಸಲು ಎರಡೂ ತಂಡಗಳು ಪ್ರಯತ್ನಿಸಲಿರುವುದರಿಂದ ಪಂದ್ಯ ರೋಚಕವಾಗುವ ನಿರೀಕ್ಷೆ ಇದೆ.

ಹಿಂದಿನ ಏಳು ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಚೆನ್ನೈಯಿನ್ ಎಫ್‌ಸಿ ಸೋತಿದೆ. ಆದರೆ ಎರಡು ಬಾರಿಯ ಚಾಂಪಿಯನ್ ಒಟ್ಟಾರೆ 11 ಪಂದ್ಯಗಳ ಪೈಕಿ ಐದನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಸಮರ್ಥವಾಗಿದೆ. ಈಸ್ಟ್ ಬೆಂಗಾಲ್ ಕಳೆದ ಆರು ಪಂದ್ಯಗಳಲ್ಲಿ ಸೋತಿಲ್ಲ. ಈ ಪೈಕಿ ಎರಡರಲ್ಲಿ ಜಯ ಸಾಧಿಸಿದೆ.

ಬ್ರೈಟ್ ಎನೊಬಾಖರೆ ಸೇರಿಕೊಂಡ ನಂತರ ತಂಡ ಉತ್ತಮ ಸಾಮರ್ಥ್ಯ ತೋರುತ್ತಿದೆ. ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ತಂಡ ಈಗ ಚೇತರಿಸಿಕೊಂಡಿದೆ. ಅದೇನಿದ್ದರೂ ತಂಡದ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದೇವೆ ಎಂದು ಚೆನ್ನೈಯಿನ್ ಕೋಚ್ ಸಾಬಾ ಲಾಜೆಲೊ ಹೇಳಿದ್ದಾರೆ.

ADVERTISEMENT

‘ಎಸ್‌ಸಿ ಈಸ್ಟ್ ಬೆಂಗಾಲ್ ಸಮರ್ಥ ಆಟಗಾರರನ್ನು ಸೇರಿಸಿಕೊಂಡು ಬಲಿಷ್ಠವಾಗಿದೆ. ರಕ್ಷಣೆಯಲ್ಲೂ ಆಕ್ರಮಣ ವಿಭಾಗದಲ್ಲೂ ಅದು ಉತ್ತಮ ಪ್ರದರ್ಶನ ತೋರಿದೆ. ನಮ್ಮ ತಂಡದ ಮಿಡ್‌ಫೀಲ್ಡ್ ವಿಭಾಗ ಬಲಿಷ್ಠವಾಗಿದೆ. ಬೆಂಗಾಲ್ ಸವಾಲು ಸ್ವೀಕರಿಸಲು ತಂಡ ಸಮರ್ಥತವಾಗಿದೆ’ ಎಂದು ಅವರು ಹೇಳಿದರು.

ರಾಬಿ ಫಾವ್ಲರ್ ಕೋಚ್ ಆಗಿರುವ ಬೆಂಗಾಲ್ ತಂಡ ಆರಂಭದಲ್ಲಿ ಸತತ ಸೋಲು ಕಂಡು ನಿರಾಸೆಗೆ ಒಳಗಾಗಿತ್ತು. ಆದರೆ ಈಗ ಪ್ಲೇ ಆಫ್‌ ಹಂತಕ್ಕೇರುವ ಭರವಸೆಯಲ್ಲಿದೆ. ಇನ್ನು ಐದು ಪಾಯಿಂಟ್ ಗಳಿಸಿದರೆ ಅದರ ಕನಸು ನನಸಾಗಲಿದೆ.

’ಗೆಲುವಿಗೆ ಪೂರಕವಾದ ಉತ್ತಮ ಅಂಶಗಳನ್ನು ಹೊಂದಿರುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಪ್ಲೇ ಆಫ್‌ ಅರ್ಹತೆ ಗಳಿಸಬೇಕಾದರೆ ಇನ್ನಷ್ಟು ಪಾಯಿಂಟ್‌ಗಳನ್ನು ಹೊಂದಬೇಕಾಗಿದೆ ಎಂಬ ಅರಿವು ಇದೆ. ಹೀಗಾಗಿ ಇನ್ನಷ್ಟು ಪಂದ್ಯಗಳನ್ನು ಗೆಲ್ಲಲು ಪ್ರಯತ್ನ ಮಾಡಲಿದ್ದೇವೆ’ ಎಂದು ಫಾವ್ಲರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.