ಲಯೊನೆಲ್ ಮೆಸ್ಸಿ
ಕೋಲ್ಕತ್ತ: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಕುತೂಹಲದಿಂದ ಕಾಯಲಾಗುತ್ತಿರುವ ಭಾರತ ‘ಗೋಟ್’ (ಗ್ರೇಟೆಸ್ಟ್ ಆಫ್ ಆಲ್ ಟೈಮ್) ಪ್ರವಾಸವನ್ನು ಗುರುವಾರ ಖಚಿತಡಿಸಿದ್ದಾರೆ. ಫುಟ್‌ಬಾಲ್ ಪ್ರೀತಿಯ ದೇಶಕ್ಕೆ ಮತ್ತೆ ಭೇಟಿ ನೀಡುವುದು ತಮಗೆ ಗೌರವದ ವಿಷಯ ಎಂದೂ ಅವರು ಬಣ್ಣಿಸಿದ್ದಾರೆ.
ಮೆಸ್ಸಿ 14 ವರ್ಷಗಳ ಹಿಂದೆ ಭಾರತದಲ್ಲಿ ಕೊನೆಯ ಬಾರಿ ಆಡಿದ್ದರು.
‘ಇಂಥ ಪ್ರವಾಸಕ್ಕೆ ಬರುವುದು ನನಗೆ ಗೌರವದ ವಿಷಯ. ಭಾರತ ಅತಿ ವಿಶೇಷ ದೇಶ. 14 ವರ್ಷಗಳ ಹಿಂದೆ ಇಲ್ಲಿಗೆ ಬಂದಾಗಿನ ಸವಿ ನೆನಪುಗಳು ನನ್ನಲ್ಲಿವೆ. ಆಟದ ಬಗ್ಗೆ ಇಲ್ಲಿನ ಫುಟ್‌ಬಾಲ್ ಪ್ರೇಮಿಗಳ ಬದ್ಧತೆ ಇಷ್ಟವೆನಿಸಿದೆ’ ಎಂದಿದ್ದಾರೆ.
ಆಯೋಜಕರು ಆಗಸ್ಟ್ 15ರಂದು ಅವರ ನಾಲ್ಕು ದಿನಗಳ ಪ್ರವಾಸದ ವೇಳಾಪಟ್ಟಿ ಅಂತಿಮಗೊಳಿಸಿದ್ದಾರೆ. ಪ್ರವಾಸವನ್ನು ಸ್ವತಃ ಮೆಸ್ಸಿ ಅವರು ಗುರುವಾರ ಮೊದಲ ಬಾರಿ ಭೇಟಿ ಖಚಿತಪಡಿಸಿದ್ದಾರೆ
ಬಿಡುವಿಲ್ಲದ ಈ ಪ್ರವಾಸದಲ್ಲಿ ಅರ್ಜೆಂಟೀನಾದ ಸೂಪರ್ ಸ್ಟಾರ್ ಆಟಗಾರ ಡಿಸೆಂಬರ್ 13ರಂದು ಕೋಲ್ಕತ್ತಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಅಹಮದಾಬಾದಿಗೆ, ನಂತರ ಮುಂಬೈಗೆ ತೆರಳುವರು. ಡಿಸೆಂಬರ್ 15ರಂದು ಪ್ರಧಾನಿ ಮೋದಿ ಅವರ ಪ್ರವಾಸದೊಡನೆ ಮೆಸ್ಸಿ ಪ್ರವಾಸ ಕೊನೆಗೊಳ್ಳಲಿದೆ.
ಕೋಲ್ಕತ್ತದಲ್ಲಿ, ‘ಗೋಟ್ ಕಚೇರಿ’, ಸಾಲ್ಟ್ ಲೇಕ್‌ನಲ್ಲಿ ‘ಗೋಟ್ ಪ್ರದರ್ಶನ ಪಂದ್ಯ’ದ ಜೊತೆ, ಅವರ 25 ಅಡಿ ಎತ್ತರದ ಪ್ರತಿಮೆ ಅನಾವರಣವೂ ನಿಗದಿಯಾಗಿದೆ. ಪ್ರದರ್ಶನ ಪಂದ್ಯದ ಟಿಕೆಟ್ ದರ 3,500 ರಿಂದ ಆರಂಭವಾಗಲಿದೆ. ಕ್ರಿಕೆಟ್ ತಾರೆ ಸೌರವ್ ಗಂಗೂಲಿ, ಟೆನಿಸ್ ತಾರೆ ಲಿಯಾಂಡರ್ ಪೇಸ್, ಫುಟ್‌ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ ಸೇರಿ ಸೆಲೆಬ್ರಿಟಿಗಳು ಈ ಪಂದ್ಯದಲ್ಲಿ ಆಡಲಿದ್ದಾರೆ.
ಮುಂಬೈನಲ್ಲೂ ಅವರು ಗೋಟ್ ಕಪ್ ಪಂದ್ಯದಲ್ಲಿ ಆಡಲಿದ್ದಾರೆ. ಅಲ್ಲಿ ಖ್ಯಾತನಾಮರಾರಾದ ಶಾರೂಕ್ ಖಾನ್, ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಸಹ ಪಾಲ್ಗೊಳ್ಳಲಿದ್ದಾರೆ.
ಪ್ರವಾಸದ ಎಲ್ಲ ಕಡೆ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.
ನವೆಂಬರ್‌ನಲ್ಲಿ ಕೇರಳ ಪ್ರವಾಸ?:
ಮೆಸ್ಸಿ ಒಳಗೊಂಡ ಅರ್ಜೆಂಟೀನಾ ರಾಷ್ಟ್ರೀಯ ತಂಡ ನವೆಂಬರ್‌ನಲ್ಲಿ ಭಾರತ ಪ್ರವಾಸಕ್ಕೆ ಬರುವ ಸಾಧ್ಯತೆಯೂ ಬಲಗೊಂಡಿದೆ. ಲಯೊನೆಲ್ ಸ್ಕಾಲೋನಿ ತರಬೇತಿಯ ತಂಡವು ನವೆಂಬರ್ 10 ರಿಂದ 18ರ ನಡುವೆ ಕೇರಳದಲ್ಲಿ ಸ್ನೇಹಪರ ಪಂದ್ಯ ಆಡಲು ಸಜ್ಜಾಗಿದೆ. ಆದರೆ ಪಂದ್ಯದ ತಾಣ ಮತ್ತು ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.