ADVERTISEMENT

ಪ್ರೀ ಕ್ವಾರ್ಟರ್‌ಫೈನಲ್‌ಗೆ ಫ್ರಾನ್ಸ್‌

ಪೆರು ತಂಡಕ್ಕೆ ನಿರಾಸೆ: ಮಿಂಚಿದ ಬಾಪೆ

ರಾಯಿಟರ್ಸ್
Published 21 ಜೂನ್ 2018, 18:47 IST
Last Updated 21 ಜೂನ್ 2018, 18:47 IST
   

ಏಕ್ತರಿನ್‌ಬರ್ಗ್‌, ರಷ್ಯಾ: ಮುಂಚೂಣಿ ವಿಭಾಗದ ಆಟಗಾರ ಕೈಲಿಯಾನ್‌ ಬಾಪೆ, ಗುರುವಾರ ಏಕ್ತರಿನ್‌ಬರ್ಗ್‌ ಅರೆನಾದಲ್ಲಿ ಸೇರಿದ್ದ ಫುಟ್‌ಬಾಲ್‌ ‍ಪ್ರಿಯರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಬಾಪೆ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್‌ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದು ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ‘ಸಿ’ ಗುಂ‍ಪಿನ ತನ್ನ ಎರಡನೇ ಹಣಾಹಣಿಯಲ್ಲಿ ಫ್ರಾನ್ಸ್‌ 1–0 ಗೋಲಿನಿಂದ ಪೆರು ತಂಡವನ್ನು ಸೋಲಿಸಿತು.

ಈ ಗೆಲುವಿನೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಆರಕ್ಕೆ ಹೆಚ್ಚಿಸಿಕೊಂಡ ಹ್ಯೂಗೊ ಲೋರಿಸ್‌ ಬಳಗ ‍ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಫ್ರಾನ್ಸ್‌ ತಂಡ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿತ್ತು.4–2–

ADVERTISEMENT

3–1ರ ಯೋಜನೆ ಹೆಣೆದು ಅಂಗಳಕ್ಕಿಳಿದಿದ್ದ ಫ್ರಾನ್ಸ್‌ ತಂಡ ಶುರುವಿನಿಂದಲೇ ಚುರುಕಿನ ಆಟ ಆಡಿತು. 36 ವರ್ಷಗಳ ನಂತರ ವಿಶ್ವಕಪ್‌ಗೆ ಅರ್ಹತೆ ಗಳಿಸಿದ್ದ ಪೆರು ಕೂಡಾ ಮಿಂಚಿತು. ಹೀಗಾಗಿ 30ನೇ ನಿಮಿಷದವರೆಗೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

ನಂತರ ಲೋರಿಸ್‌ ಬಳಗ ಆಟದ ವೇಗ ಹೆಚ್ಚಿಸಿಕೊಂಡಿತು. 34ನೇ ನಿಮಿಷದಲ್ಲಿ ಬಾಪೆ ಕಾಲ್ಚಳಕ ತೋರಿದರು. ಎದುರಾಳಿ ಆವರಣದ ಎಡತುದಿಯಿಂದ ಸಹ ಆಟಗಾರ ಒದ್ದು ಕಳುಹಿಸಿದ ಚೆಂಡನ್ನು 19ರ ಹರೆಯದ ಬಾಪೆ ಚುರುಕಾಗಿ ಗುರಿ ತಲುಪಿಸಿ ಫ್ರಾನ್ಸ್‌ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಲೋರಿಸ್‌ ಪಡೆ ದ್ವಿತೀಯಾರ್ಧದಲ್ಲೂ ಮಿಂಚಿನ ಆಟ ಆಡಿ ಜಯದ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.