ADVERTISEMENT

ಫಿಫಾ ವಿಶ್ವಕಪ್ | ನೆದರ್ಲೆಂಡ್ಸ್‌ ವಿರುದ್ದ ಗೆಲುವು, ಮೆಸ್ಸಿ ಬಳಗ ಸೆಮಿಗೆ ಲಗ್ಗೆ

ರೋಚಕ ಹಣಾಹಣಿ

ರಾಯಿಟರ್ಸ್
Published 10 ಡಿಸೆಂಬರ್ 2022, 17:40 IST
Last Updated 10 ಡಿಸೆಂಬರ್ 2022, 17:40 IST
ನೆದರ್ಲೆಂಡ್ಸ್‌ ವಿರುದ್ಧ ಗೆದ್ದ ಅರ್ಜೆಂಟೀನಾ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ ವಿರುದ್ಧ ಗೆದ್ದ ಅರ್ಜೆಂಟೀನಾ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ   

ಲುಸೈಲ್‌, ಕತಾರ್‌: ಪೆನಾಲ್ಟಿ ಶೂಟೌಟ್‌ನಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿದ ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಲುಸೈಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯವನ್ನು ನಿಗದಿತ ಅವಧಿಯಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದರೂ ಶೂಟೌಟ್‌ನಲ್ಲಿ 4-3 ರಲ್ಲಿ ಗೆದ್ದ ದಕ್ಷಿಣ ಅಮೆರಿಕದ ತಂಡ, ಟ್ರೋಫಿ ಜಯಿಸುವ ಕನಸು ಜೀವಂತವಾಗಿರಿಸಿಕೊಂಡಿತು.

ಶೂಟೌಟ್‌ನಲ್ಲಿ ಎದುರಾಳಿ ತಂಡದ ಎರಡು ಗೋಲುಗಳನ್ನು ತಡೆದ ಗೋಲ್‌ಕೀಪರ್‌ ಎಮಿಲಿಯಾನೊ ಮಾರ್ಟಿನೆಜ್‌ ಮತ್ತು ಕೊನೆಯ ಕಿಕ್‌ನಲ್ಲಿ ಗೋಲು ಗಳಿಸಿದ ಲೌಟಾರೊ ಮಾರ್ಟಿನೆಜ್‌ ಅವರು ಅರ್ಜೆಂಟೀನಾದ ಗೆಲುವಿನ ರೂವಾರಿಗಳು.

ADVERTISEMENT

82 ನಿಮಿಷಗಳವರೆಗೂ 0–2 ರಲ್ಲಿ ಹಿನ್ನಡೆಯಲ್ಲಿದ್ದು, ಆ ಬಳಿಕ ಮರುಹೋರಾಟ ನಡೆಸಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ಗೆ ಕೊಂಡೊಯ್ದ ನೆದರ್ಲೆಂಡ್ಸ್‌ ತಂಡದ ಆಟ ಕೂಡಾ ಅಭಿಮಾನಿಗಳ ಮನಗೆದ್ದಿತು.

ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಮೈನವಿರೇಳಿಸಿದ ಪಂದ್ಯದಲ್ಲಿ ನಿಗದಿತ ಹಾಗೂ ಹೆಚ್ಚುವರಿ ಅವಧಿಯ ಬಳಿಕ ಎರಡೂ ತಂಡಗಳು 2–2 ರಲ್ಲಿ ಸಮಬಲ ಸಾಧಿಸಿದ್ದವು.

ಪೆನಾಲ್ಟಿಯಲ್ಲಿ ನೆದರ್ಲೆಂಡ್ಸ್‌ನ ವರ್ಜಿಲ್‌ ವಾನ್‌ ಡೈಕ್‌ ಮತ್ತು ಸ್ಟೀವನ್‌ ಬೆರ್ಗುಯಿಸ್‌ ಅವರ ಕಿಕ್‌ಗಳನ್ನು ಮಾರ್ಟಿನೆಜ್‌ ತಡೆದರು. ಟೆನ್‌ ಕೂಪ್‌ಮೆನರ್ಸ್‌, ವೌಟ್‌ ವೆಗೋಸ್ಟ್‌ ಮತ್ತು ಲೂಕ್‌ ಡಿ ಜಾಂಗ್‌ ಗುರಿ ಸೇರಿಸಿದರು.

ಅರ್ಜೆಂಟೀನಾ ಪರ ಮೊದಲ ಮೂರು ಅವಕಾಶಗಳಲ್ಲಿ ಮೆಸ್ಸಿ, ಲಿಯಾಂಡ್ರೊ ಪರೆಡೆಸ್‌ ಮತ್ತು ಗೊಂಜಾಲೊ ಮಾಂಟಿಯೆಲ್‌ ಗುರಿ ಸೇರಿಸಿದರೆ, ನಾಲ್ಕನೇ ಅವಕಾಶದಲ್ಲಿ ಫೆರ್ನಾಂಡಿಸ್‌ ಚೆಂಡನ್ನು ಗೋಲ್‌ಪೋಸ್ಟ್‌ನಿಂದ ಹೊರಕ್ಕೆ ಹೊಡೆದರು.

ಐದನೇ ಕಿಕ್‌ ತೆಗೆದ ಲೌಟಾರೊ ಮಾರ್ಟಿನೆಜ್‌ ಒದ್ದ ಚೆಂಡು ಎದುರಾಳಿ ಗೋಲ್‌ಕೀಪರ್‌ ಆಂಡ್ರೆಸ್‌ ನೊಪೆರ್ಟ್‌ ಅವರನ್ನು ತಪ್ಪಿಸಿಕೊಂಡು ಗುರಿ ಸೇರುತ್ತಿದ್ದಂತೆಯೇ ಅರ್ಜೆಂಟೀನಾ ಆಟಗಾರರ ಮತ್ತು ಮೆಸ್ಸಿ ಅವರ ಕೋಟ್ಯಾಂತರ ಅಭಿಮಾನಿಗಳ ಸಂಭ್ರಮದ ಕಟ್ಟೆಯೊಡೆಯಿತು. ಡಿ.13 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಮೆಸ್ಸಿ ಬಳಗ, ಕ್ರೊವೇಷ್ಯಾದ ಸವಾಲು ಎದುರಿಸಲಿದೆ.

ನೆದರ್ಲೆಂಡ್ಸ್‌ ಮರುಹೋರಾಟ: ಅರ್ಜೆಂಟೀನಾ ತಂಡ ನಿಗದಿತ 90 ನಿಮಿಷಗಳ ಆಟದಲ್ಲೇ ಗೆಲ್ಲಬೇಕಿತ್ತು. ಆದರೆ ಅದ್ಭುತವಾಗಿ ಮರುಹೋರಾಟ ನಡೆಸಿದ ನೆದರ್ಲೆಂಡ್ಸ್‌ ಅದಕ್ಕೆ ಅವಕಾಶ ನೀಡಲಿಲ್ಲ.

35ನೇ ನಿಮಿಷದಲ್ಲಿ ಅರ್ಜೆಂಟೀನಾ ಮುನ್ನಡೆ ಗಳಿಸಿತು. ಮೆಸ್ಸಿ ನೀಡಿದ ಪಾಸ್‌ನಲ್ಲಿ ನಹುಯೆಲ್‌ ಮೊಲಿನಾ ಚೆಂಡನ್ನು ಗುರಿ ಸೇರಿಸಿದರು. ಮೆಸ್ಸಿ ಎದುರಾಳಿ ಡಿಫೆಂಡರ್‌ಗಳನ್ನು ತಪ್ಪಿಸಿ ಪಾಸ್‌ ನೀಡಿದ ರೀತಿ ಸೊಗಸಾಗಿತ್ತು. 73ನೇ ನಿಮಿಷದಲ್ಲಿ ತಂಡಕ್ಕೆ ದೊರೆತ ಪೆನಾಲ್ಟಿ ಕಿಕ್‌ ಅವಕಾಶವನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿದರು.

83ನೇ ನಿಮಿಷದಲ್ಲಿ ವೌಟ್‌ ವೆಗೋಸ್ಟ್‌ ಚೆಂಡನ್ನು ಗುರಿಸೇರಿಸಿ ನೆದರ್ಲೆಂಡ್ಸ್‌ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಇಂಜುರಿ ಅವಧಿಯಲ್ಲಿ (90+11ನೇ ನಿ.) ಅವರು ಮತ್ತೊಂದು ಗೋಲು ಗಳಿಸಿ 2–2 ರಲ್ಲಿ ಸಮಬಲಕ್ಕೆ ಕಾರಣರಾದರು.

ಲುಸೈಲ್‌ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ತಂಡಕ್ಕೆ ತವರಿನಲ್ಲಿ ಆಡಿದ ಅನುಭವ ಉಂಟಾಯಿತು. ಏಕೆಂದರೆ ಪಂದ್ಯ ನೋಡಲು ಸೇರಿದ್ದ 88 ಸಾವಿರದಷ್ಟು ಪ್ರೇಕ್ಷಕರಲ್ಲಿ ಶೇ 75 ರಷ್ಟು ಅರ್ಜೆಂಟೀನಾ ತಂಡದ ಅಭಿಮಾನಿಗಳೇ ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.