ADVERTISEMENT

ಇಂಟರ್‌, ಎಸಿ ಮಿಲನ್ ಆಟಗಾರರ ಅಭ್ಯಾಸ ಆರಂಭ

ಏಜೆನ್ಸೀಸ್
Published 8 ಮೇ 2020, 19:30 IST
Last Updated 8 ಮೇ 2020, 19:30 IST
   

ಮಿಲನ್: ಇಟಲಿ ಫುಟ್‌ಬಾಲ್‌ನ ಪ್ರಮುಖ ಕ್ಲಬ್‌ಗಳಾದ ಇಂಟರ್ ಮಿಲನ್ ಮತ್ತು ಎಸಿ ಮಿಲನ್ ಕ್ಲಬ್‌ಗಳ ಆಟಗಾರರು ಎರಡು ತಿಂಗಳ ನಂತರ ಅಭ್ಯಾಸಕ್ಕಾಗಿ ಶುಕ್ರವಾರ ಅಂಗಳಕ್ಕೆ ಇಳಿದರು.

ಕೊರೊನಾ–19 ಹಾವಳಿಯಿಂದ ಕಂಗಾಲಾಗಿದ್ದ ಇಟಲಿಯಲ್ಲಿ ಲಾಕ್‌ಡೌನ್‌ನಿಂದಾಗಿ ಆಟಗಾರರು ತಾವಿದ್ದಲ್ಲೇ ಕಳೆಯಬೇಕಾಗಿತ್ತು. ಶುಕ್ರವಾರ ಅವರ ಪರೀಕ್ಷಾ ವರದಿಗಳು ಬಂದಿದ್ದು ಕೋವಿಡ್ ಇಲ್ಲ ಎಂದು ದೃಢಪಟ್ಟ ಕಾರಣ ಮಧ್ಯಾಹ್ನದ ನಂತರ ಅಂಗಣಕ್ಕೆ ಕಳುಹಿಸಲಾಯಿತು. ಆದರೆ ವೈಯಕ್ತಿಕವಾಗಿ ಅಭ್ಯಾಸ ಮಾಡುವುದಕ್ಕಷ್ಟೇ ಅವಕಾಶ ನೀಡಲಾಗಿತ್ತು.

ಇಟಲಿ ತಂಡದ ಮಾಜಿ ನಾಯಕ ಪೌಲೊ ಮಾಲ್ಡಿನಿ ‘ಆಡಗಾರರು ಕ್ರೀಡಾಂಗಣಕ್ಕೆ ಇಳಿಯದಿದ್ದರೆ ಅದೇ ದೊಡ್ಡ ವಿಕೋಪ ಆಗಲಿದೆ’ ಎಂದು ಈಚೆಗೆ ಹೇಳಿದ್ದರು. ಮಾಲ್ಡಿನಿ ಮತ್ತು ಅವರ 18 ವರ್ಷದ ಪುತ್ರ, ಎಸಿ ಮಿಲನ್ ಯುವ ತಂಡದ ಆಟಗಾರ ಡ್ಯಾನಿಯಲ್ ಅವರು ಕೋವಿಡ್‌ನಿಂದ ಇತ್ತೀಚೆಗೆ ಗುಣಮುಖರಾಗಿದ್ದರು. ಕೆಲವು ಆಟಗಾರರು ಕ್ವಾರಂಟೈನ್‌ನಲ್ಲಿದ್ದರು.

ADVERTISEMENT

ಥೈವಾನ್‌: ಪ್ರೇಕ್ಷಕರ ಸಂಭ್ರಮ
ನ್ಯೂ ತೈಪೆ ಸಿಟಿ:
ಥೈವಾನ್‌ನ ಬೇಸ್‌ಬಾಲ್ ಪ್ರೇಮಿಗಳಿಗೆ ಶುಕ್ರವಾರ ಸಂಭ್ರಮದ ದಿನ. ಅವರಿಗೆ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ನೀಡಲಾಗಿತ್ತು.

ಕೊರೊನಾ ಹಾವಳಿಯ ನಡುವೆಯೂ ಥೈವಾನ್‌ನಲ್ಲಿ ವೃತ್ತಿಪರ ಲೀಗ್‌ಗಳಿಗೆ ಅವಕಾಶ ನೀಡಲಾಗಿದೆ. ಈಗ ಪ್ರೇಕ್ಷಕರನ್ನೂ ಕ್ರೀಡಾಂಗಣಗಳ ಒಳಗೆ ಬಿಡಲಾಗಿದೆ. ಪ್ರೇಕ್ಷಕರು ಇಲ್ಲದೇ ನಡೆಯುತ್ತಿದ್ದ ಪಂದ್ಯಗಳ ಸಂದರ್ಭದಲ್ಲಿ ಆಟಗಾರರನ್ನು ಹುರಿದುಂಬಿಸಲು ಕ್ಲಬ್‌ಗಳು ನಾನಾ ಬಗೆಯ ಕಸರತ್ತು ಮಾಡಿದ್ದವು. ಬೃಹತ್ ಕಟ್ ಔಟ್ ಮತ್ತು ಬ್ಯಾಂಡು ಬಾರಿಸುವ ರೋಬೋಟ್‌ಗಳನ್ನು ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ಇರಿಸಿ ಗಮನ ಸೆಳೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.