ADVERTISEMENT

FIFA World Cup 2022: ನವತಾರೆಗಳು

ಗಿರೀಶದೊಡ್ಡಮನಿ
Published 19 ನವೆಂಬರ್ 2022, 23:45 IST
Last Updated 19 ನವೆಂಬರ್ 2022, 23:45 IST
ಲಯೊನೆಲ್ ಮೆಸ್ಸಿ
ಲಯೊನೆಲ್ ಮೆಸ್ಸಿ   

ಫಿಫಾ ವಿಶ್ವಕಪ್ ಟೂರ್ನಿಯೆಂದರೆ ಕನಸುಗಳ ಕಾರ್ಖಾನೆ ಇದ್ದಂತೆ. ಫುಟ್‌ಬಾಲ್ ಆಗಸದಲ್ಲಿ ನವತಾರೆಗಳು ಉದಯಿಸುವ ವೇದಿಕೆಯೂ ಹೌದು.

ಈ ಸಲ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿ ಕೂಡ ಇಂತಹದ್ದೇ ವೈಶಿಷ್ಟ್ಯಗಳನ್ನು ಹೊಂದಿದೆ. ಫುಟ್‌ಬಾಲ್ ಅಂಗಳದಲ್ಲಿ ದಶಕಗಳಿಂದ ಮೆರೆದ ದಿಗ್ಗಜರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. ಅವರ ಸ್ಥಾನವನ್ನು ತುಂಬಲು ಯುವತಾರೆಗಳ ದೊಡ್ಡ ದಂಡು ಪೈಪೋಟಿಗೆ ಇಳಿದಿದೆ. ಫುಟ್‌ಬಾಲ್ ಶಕ್ತಿಕೇಂದ್ರಗಳೆನಿಸಿಕೊಂಡು ದೇಶಗಳು ಮತ್ತು ವಿಶ್ವ ಭೂಪಟದಲ್ಲಿ ಪುಟ್ಟದಾಗಿ ಗೋಚರಿಸುವ ರಾಷ್ಟ್ರಗಳ ಪ್ರತಿಭಾನ್ವಿತರು ಜಿದ್ದಾಜಿದ್ದಿ ನಡೆಸಲು ಸಿದ್ಧರಾಗಿದ್ದಾರೆ.

ಕಳೆದ ಸಲ ರಷ್ಯಾದಲ್ಲಿ ವಿಶ್ವಕಪ್ ಟೂರ್ನಿ ನಡೆದಾಗ ಹಲವಾರು ನವತಾರೆಗಳನ್ನು ಕ್ರೀಡಾಜಗತ್ತು ಕಂಡಿದೆ. ಫ್ರಾನ್ಸ್‌ನ ಕೈಲಿಯನ್ ಎಂಬಾಪೆ, ಕ್ರೊವೇಷ್ಯಾದ ಲುಕಾ ಮ್ಯಾಡ್ರಿಚ್ ಅವರು ಪ್ರಮುಖರು. ಈ ಬಾರಿಯೂ ಇವರಿಬ್ಬರೂ ಕಣದಲ್ಲಿದ್ದಾರೆ. ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಬ್ರೆಜಿಲ್‌ನ ನೇಮರ್ ಅವರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. ವಿಜಯಮಾಲೆಯೊಂದಿಗೆ ನಿರ್ಗಮಿಸುವ ಛಲ ಅವರದ್ದು. ಅವರ ಸ್ಥಾನ ತುಂಬುವ ಎಂಟೆದೆ ಭಂಟರು ಯಾರು ಎಂಬ ಕುತೂಹಲ ಗರಿಗೆದರಿದೆ. ಕೆಲವು ಭರವಸೆಯ ಪ್ರತಿಭೆಗಳ ಪರಿಚಯ ಇಲ್ಲಿದೆ;

ADVERTISEMENT

ಆ್ಯಂಡ್ರೆ ಒನಾನಾ

ಕ್ಯಾಮರಾನ್ ತಂಡದ 26 ವರ್ಷದ ಗೋಲ್‌ಕೀಪರ್. ಬರೋಬ್ಬರಿ ಒಂದು ವರ್ಷದ ಹಿಂದಿನ ಪರಿಸ್ಥಿತಿ ನೋಡಿದರೆ ಆ್ಯಂಡ್ರೆ ಫುಟ್‌ಬಾಲ್ ಕ್ರೀಡೆಯಿಂದಲೇ ವಿಮುಖರಾಗಬೇಕಿತ್ತು. ತಮ್ಮ ಅನಾರೋಗ್ಯಕ್ಕೆ ಪತ್ನಿಯು ನೀಡಿದ್ದ ಔಷಧಿ ಸೇವಿಸಿದ್ದು ಮುಳುವಾಗಿತ್ತು. ಆ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶಗಳಿದ್ದ ಕಾರಣಕ್ಕೆ ಒಂದು ವರ್ಷ ಅಮಾನತು ಶಿಕ್ಷೆಗೊಳಗಾದರು. ಕಳೆದ ಮಾರ್ಚ್‌ನಲ್ಲಿ ಕಾರು ಅಪಘಾತವಾದಾಗ ಗಾಯಗೊಂಡಿದ್ದರು. ಆದೆಲ್ಲವನ್ನೂ ದಾಟಿ ಈಗ ಕಣಕ್ಕಿಳಿಯುತ್ತಿದ್ದಾರೆ. ಸದ್ಯ ಇಂಟರ್ ಮಿಲಾನ್ ತಂಡವನ್ನು ಫ್ರ್ಯಾಂಚೈಸಿ ಲೀಗ್‌ ಟೂರ್ನಿಯಲ್ಲಿ ಪ್ರತಿನಿಧಿಸುತ್ತಾರೆ. ಈ ಹಿಂದೆ ಜಾಂಗ್ ಅಜಾಕ್ಸ್ ಮತ್ತು ಜಾಕ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು.

ಜಮಾಲ್ ಮುಸಿಯಾಲಾ

ಜರ್ಮನಿಯ 19 ವರ್ಷದ ಹುಡುಗ ಸದ್ಯ ವಿಶ್ವದ ಫುಟ್‌ಬಾಲ್‌ನಲ್ಲಿ ಅತ್ಯಂತ ಆಕ್ರಮಣಶೀಲ ಮಿಡ್‌ಫೀಲ್ಡರ್‌ ಎಂದು ಗುರುತಿಸಿಕೊಂಡಿದ್ದಾರೆ. ಬೇರನ್ ಮ್ಯೂನಿಕ್‌ ಕ್ಲಬ್‌ನ ಕೋಚ್‌ಗಳ ಮೆಚ್ಚುಗೆ ಗಳಿಸಿರುವ ಆಟಗಾರ. ಸ್ಟಟ್‌ಗರ್ಟ್‌ನಲ್ಲಿ ಜನಿಸಿದ ಜಮಾಲ್ ಅವರ ತಾಯಿ ಪೋಲೆಂಡ್ ಮೂಲದವರು. 16ನೇ ವಯಸ್ಸಿನಲ್ಲಿಯೇ ಚೆಲ್ಸಿ ಕ್ಲಬ್‌ ಗಮನಸೆಳೆದರು. ಇಂಗ್ಲೆಂಡ್‌ನಲ್ಲಿ 15 ವರ್ಷದೊಳಗಿನವರ ತಂಡದಲ್ಲಿ ಆಡಿದರು. ನಂತರ ಜರ್ಮನಿಯಲ್ಲಿ 16 ವರ್ಷದೊಳಗಿನವರ ತಂಡಕ್ಕೆ ತೆರಳಿದರು. 7 ವರ್ಷದೊಳಗಿನ ಹಾಗೂ 21 ವರ್ಷದೊಳಗಿನ ಟೂರ್ನಿಗಳಲ್ಲಿ ಇಂಗ್ಲೆಂಡ್‌ ತಂಡಕ್ಕೆ ಮರಳಿದ್ದರು. 2021ರಿಂದ ತಮ್ಮ ತವರು ಜರ್ಮನಿ ತಂಡಕ್ಕೆ ಆಡುತ್ತಿದ್ದಾರೆ. 20 ಅಂತರರಾಷ್ಟ್ರೀಯ ಗೋಲುಗಳು ಅವರ ಖಾತೆಯಲ್ಲಿವೆ.

ಅಲ್ಮೊಜ್ ಅಲಿ

ಬಡತನ, ಕ್ರೌರ್ಯಗಳು ತುಂಬಿ ತುಳುಕುತ್ತಿದ್ದ ಸುಡಾನ್‌ ದೇಶದಲ್ಲಿ ಜನಿಸಿದ ಅಲ್ಮೋಜ್ ಅಲಿ ಜೈನಾಲಬೆದೀನ್ ಮೊಹಮ್ಮದ್ ಅಬ್ದುಲ್ಲಾ ಬಾಲ್ಯದಲ್ಲಿಯೇ ತಮ್ಮ ತಾಯಿಯೊಂದಿಗೆ ಕತಾರ್‌ಗೆ ವಲಸೆ ಬಂದರು. ಏಳನೇ ವಯಸ್ಸಿನಲ್ಲಿ ಅಂಟಿದ ಕಾಲ್ಚೆಂಡಿನ ಪ್ರೀತಿ ಈಗ ಹೆಮ್ಮರವಾಗಿದೆ. ಸ್ಟ್ರೈಕರ್ ಆಗಿರುವ 26 ವರ್ಷದ ಅಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕತಾರ್ ತಂಡವನ್ನು 85 ಪಂದ್ಯಗಳಲ್ಲಿ ಪ್ರತಿನಿಧಿಸಿ 42 ಗೋಲುಗಳನ್ನು ಹೊಡೆದಿದ್ದಾರೆ.

ಲಾಟೆರೊ ಮಾರ್ಟಿನೇಜ್

ಲಯೊನೆಲ್ ಮೆಸ್ಸಿಯ ವಾರಸುದಾರ ಎಂದೇ ಬಿಂಬಿತರಾಗಿರುವ ಅರ್ಜೆಂಟೀನಾದ ಸ್ಟ್ರೈಕರ್. ದೇಶದ ತಂಡಕ್ಕೆ 40 ಪಂದ್ಯಗಳಲ್ಲಿ ಆಡಿರುವ ಅವರು 21 ಗೋಲುಗಳನ್ನು ಗಳಿಸಿದ್ದಾರೆ. ಇಂಟರ್ ಮಿಲಾನ್ ತಂಡಕ್ಕೆ 150 ಪಂದ್ಯಗಳಲ್ಲಿ ಕಣಕ್ಕಿಳಿದ ಅನುಭವ ಅವರದ್ದು. 25 ವರ್ಷದ ಮಾರ್ಟಿನೇಜ್ ಬಾಲ್ಯದಲ್ಲಿ ತಮ್ಮದೇ ದೇಶದ ಡಿಯಾಗೊ ಮರಡೋನಾ ಅವರಿಂದ ಪ್ರೇರಿತರಾಗಿ ಫುಟ್‌ಬಾಲ್ ಅಂಗಳಕ್ಕೆ ಧುಮುಕಿದವರು. ವೃತ್ತಿಪರ ಫುಟ್‌ಬಾಲ್‌ನಲ್ಲಿ ಈಗ ಅವರದ್ದು ದೊಡ್ಡ ಹೆಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.