ADVERTISEMENT

ಜೆರ್ಸಿ ನಂಬರ್ 10ರ ದಂತಕಥೆ...

ಗಿರೀಶದೊಡ್ಡಮನಿ
Published 26 ನವೆಂಬರ್ 2020, 2:25 IST
Last Updated 26 ನವೆಂಬರ್ 2020, 2:25 IST
ನಂಬರ್ 10 ಜೆರ್ಸಿ ಧರಿಸಿರುವ ಡೀಗೊ ಮರಡೋನಾ
ನಂಬರ್ 10 ಜೆರ್ಸಿ ಧರಿಸಿರುವ ಡೀಗೊ ಮರಡೋನಾ   
""
""
""

'ಜೆರ್ಸಿ ನಂಬರ್ 10..'

ಅದು ಫುಟ್‌ಬಾಲ್ ಇರಲಿ ಅಥವಾ ಕ್ರಿಕೆಟ್ ಇರಲಿ. ಹತ್ತು ಸಂಖ್ಯೆಯ ಪೋಷಾಕು ಧರಿಸಿದವರೆಲ್ಲರೂ ಖ್ಯಾತನಾಮರಾದರು. ಕೀರ್ತಿ, ಸಂಪತ್ತು ಅವರ ಪದತಲಕ್ಕೆ ಬಂದು ಬಿತ್ತು. ಸಂಖ್ಯೆಯ ಹತ್ತರ ಕರಾಮತ್ತು ದೊಡ್ಡದು.

1980ರ ದಶಕದಲ್ಲಿ ಅರ್ಜೆಂಟೀನಾ ತಂಡದ ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದರೆ, ನೋಡುಗರ ಕಣ್ಣು 10 ನಂಬರ್‌ನ್ನೇ ಹುಡುಕುತ್ತಿದ್ದವು. ದೃಷ್ಟಿಗಳು ಆ ಸಂಖ್ಯೆಯನ್ನು ಹಿಂಬಾಲಿಸುತ್ತಿದ್ದವು. ಏಕೆಂದರೆ ಆ ಸಂಖ್ಯೆಯ ಜೆರ್ಸಿ ಧರಿಸುತ್ತಿದ್ದವರು ಡೀಗೊ ಮರಡೋನಾ. ಅವರಿಗೆ ಚೆಂಡು ಸಿಕ್ಕರೆ ಸಾಕು ಗೋಲು ಖಚಿತ ಎನ್ನುವಂತಿದ್ದ ಕಾಲ ಇದು.

ADVERTISEMENT

ಫುಟ್‌ಬಾಲ್ ಜಗತ್ತಿನ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದ್ದ ಬ್ರೆಜಿಲ್ ತಂಡಕ್ಕೆ ಸರಿಸಮನಾಗಿ ಅರ್ಜೆಂಟೀನಾ ಬೆಳೆಯಬೇಕಾದರೆ ಮರಡೋನಾ ಕಾಣಿಕೆ ದೊಡ್ಡದು. ಅದಕ್ಕಾಗಿಯೇ ಅವರು ಆ ದೇಶದ ಫುಟ್‌ಬಾಲ್ ದೇವರು.

ಮರಡೋನಾ ಅವರಿಗಿಂತ ಮುನ್ನ ನಂಬರ್ 10ರ ಗಮ್ಮತ್ತು ಪೆಲೆ ಅವರಿಂದಾಗಿ ವಿಶ್ವದಲ್ಲಿ ಪಸರಿಸಿತ್ತು. ಮೂರು ವಿಶ್ವಕಪ್‌ಗಳನ್ನು ಗೆದ್ದು ಬ್ರೆಜಿಲ್‌ ಮುಡಿಗೆ ಅಲಂಕರಿಸಿದ ಪೆಲೆ ಅವರ ತಾರಾ ವರ್ಚಸ್ಸು ಇಂದಿಗೂ ಕುಗ್ಗಿಲ್ಲ. ನಿಜವಾಗಿಯೂ ಅವರ ಇಮೇಜ್‌ನಿಂದಾಗಿಯೇ ಜೆರ್ಸಿ ನಂಬರ್ 10ರ ಖ್ಯಾತಿ ಗಗನಕ್ಕೇರಿದ್ದು. ಅವರ ನಂತರ ಮರಡೋನಾ ಮೆರಗು ಹೆಚ್ಚಿಸಿದರು.

ಇನ್ನು ಈ ಕಾಲದ ಕಣ್ಮಣಿ, ಮರಡೋನಾ ನಂತರದ ಅರ್ಜೆಂಟೀನಾ ಫುಟ್‌ಬಾಲ್‌ ಕ್ರೀಡೆಯ ವಾರಸುದಾರ ಲಯೊನೆಲ್ ಮೆಸ್ಸಿ ಕೂಡ ಅದೇ ಹತ್ತರ ಗಮ್ಮತ್ತಿನ ಪೋಷಾಕು ಧರಿಸುತ್ತಾರೆ. ಅವರ ಆಟಕ್ಕೆ ಮನಸೋಲದವರು ಯಾರಿದ್ದಾರೆ?

ಲಯೊನೆಲ್ ಮೆಸ್ಸಿ

ಫ್ರಾನ್ಸ್ ಫುಟ್‌ಬಾಲ್ ತಾರೆ ಜಿನೆದಿನ್ ಜಿದಾನ್ ಕೂಡ ತಮ್ಮ ದೇಶದ ತಂಡಕ್ಕೆ ಆಡುವಾಗ ಧರಿಸಿದ್ದು ಕೂಡ ಇದೇ ಸಂಖ್ಯೆಯ ಪೋಷಾಕನ್ನು.

ಫುಟ್‌ಬಾಲ್ ತಾರೆಯನ್ನು ಅನುಕರಿಸುವ ಕ್ರಿಕೆಟಿಗರಿಗೂ ಈ ಸಂಖ್ಯೆಯ ಮೇಲೆ ಎಲ್ಲಿಲ್ಲದ ಪ್ರೀತಿ. ಕಾಕತಾಳೀಯವೋ ಏನೋ ಗೊತ್ತಿಲ್ಲ. ನಂಬರ್ 10ರ ಜೆರ್ಸಿ ಧರಿಸಿದ ಕ್ರಿಕೆಟಿಗರು ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ.

ಸಚಿನ್ ತೆಂಡೂಲ್ಕರ್‌

ಭಾರತದ ಸಚಿನ್ ತೆಂಡೂಲ್ಕರ್‌ ಅವರು ಧರಿಸುತ್ತಿದ್ದ ಪೋಷಾಕಿಗೂ ಇದೇ ಸಂಖ್ಯೆಯಿತ್ತು. ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ ಐದು ವರ್ಷಗಳ ನಂತರ ಈ ಸಂಖ್ಯೆಗೆ ಬಿಸಿಸಿಐ ನಿವೃತ್ತಿ ಘೋಷಿಸಿತು. ಇದರಿಂದಾಗಿ ಬೇರೆ ಆಟಗಾರರು ಆ ಸಂಖ್ಯೆಯನ್ನು ಬಳಸುವಂತಿಲ್ಲ. ಇದು ಸಚಿನ್ ಅವರ ಸಾಧನೆಗೆ ಸಂದ ಗೌರವವೂ ಹೌದು.

ಪಾಕಿಸ್ತಾನದ ಆಲ್‌ರೌಂಡರ್‌ ಶಾಹೀದ್ ಆಫ್ರಿದಿ ಕೂಡ ಹತ್ತು ಸಂಖ್ಯೆಯ ಜೆರ್ಸಿ ಧರಿಸಿದ್ದವರು. ಅವರು ಕೂಡ ಹಲವು ದಾಖಲೆಗಳನ್ನು ಬರೆದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದವರು.

ಶಾಹೀದ್ ಆಫ್ರಿದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.