ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಅಜೇಯ ಬಿಎಫ್‌ಸಿಗೆ ಗೆಲುವಿನ ಭರವಸೆ

ಒಡಿಶಾ ಎಫ್‌ಸಿಗೆ ಮೊದಲ ಜಯದ ನಿರೀಕ್ಷೆ

ಪಿಟಿಐ
Published 16 ಡಿಸೆಂಬರ್ 2020, 20:04 IST
Last Updated 16 ಡಿಸೆಂಬರ್ 2020, 20:04 IST
ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ
ಸುನಿಲ್ ಚೆಟ್ರಿ –ಟ್ವಿಟರ್ ಚಿತ್ರ   

‌ಬ್ಯಾಂಬೊಲಿಮ್: ಸೋಲರಿಯದೆ ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಒಡಿಶಾ ಎಫ್‌ಸಿಯನ್ನು ಎದುರಿಸಲಿದೆ. ಐದು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲಾಗದ ಒಡಿಶಾ ತಂಡ ಮೊದಲ ಗೆಲುವಿಗಾಗಿ ಪ್ರಯತ್ನಿಸಲಿರುವುದರಿಂದ ಈ ಪಂದ್ಯ ಕುತೂಹಲ ಕೆರಳಿಸಿದೆ.

ಈ ವರೆಗೆ ಐದು ಪಂದ್ಯಗಳನ್ನು ಆಡಿರುವ ಒಡಿಶಾ ಎ‍ಫ್‌ಸಿ ನಾಲ್ಕು ಪಂದ್ಯಗಳಲ್ಲಿ ಸೋತಿದ್ದು ಒಂದನ್ನು ಮಾತ್ರ ಡ್ರಾ ಮಾಡಿಕೊಂಡಿದೆ. ಹೀಗಾಗಿ ತಂಡದ ಖಾತೆಯಲ್ಲಿ ಒಂದು ಪಾಯಿಂಟ್ ಮಾತ್ರ ಇದೆ. ಬಿಎಫ್‌ಸಿ ಐದು ಪಂದ್ಯಗಳಲ್ಲಿ ಎರಡನ್ನು ಗೆದ್ದುಕೊಂಡು ಮೂರರಲ್ಲಿ ಡ್ರಾ ಸಾಧಿಸಿದೆ. ಒಡಿಶಾ ಈ ವರೆಗೆ ಎರಡು ಗೋಲುಗಳನ್ನು ಮಾತ್ರ ಗಳಿಸಿದೆ. ಆ ಗೋಲುಗಳು, ಜೆಮ್ಶೆಡ್‌ಪುರ ಎದುರಿನ ಪಂದ್ಯದಲ್ಲಿ ಮೂಡಿ ಬಂದಿದ್ದವು. ಒಡಿಶಾ ಗೋಲು ಗಳಿಸಿದಾಗ ಜೆಮ್ಶೆಡ್‌ಪುರ ತಂಡದಲ್ಲಿ 10 ಮಂದಿ ಮಾತ್ರ ಇದ್ದರು. ಹೀಗಾಗಿ ಬಲಿಷ್ಠ ಬಿಎಫ್‌ಸಿ ವಿರುದ್ಧ ತಂಡಕ್ಕೆ ಗೋಲು ಗಳಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಸ್ಟುವರ್ಟ್ ಬಾಕ್ಸ್‌ಟರ್ ಅವರ ಒಡಿಶಾ ಎಫ್‌ಸಿ ಈ ವರೆಗೆ ಪ್ರತಿ ಪಂದ್ಯದಲ್ಲಿ ಗುರಿಯತ್ತ ಒದ್ದಿರುವುದು 2.4 ಶಾಟ್‌ಗಳನ್ನು ಮಾತ್ರ. ಹೀಗಾಗಿ ಮತ್ತಷ್ಟು ಆಕ್ರಮಣಕಾರಿ ಆಟವಾಡಲು ಸಜ್ಜಾಗಬೇಕಾದ ಅಗತ್ಯವವನ್ನು ಬಾಕ್ಸ್‌ಟರ್ ಒತ್ತಿ ಹೇಳಿದ್ದಾರೆ.

ADVERTISEMENT

‘ನಿಜವಾಗಿಯೂ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಆದ್ಯತೆ ಕೊಡಬೇಕಾಗಿದೆ. ಅವಕಾಶಗಳನ್ನು ಸೃಷ್ಟಿಸಲು ಮತ್ತು ಎದುರಾಳಿ ತಂಡಕ್ಕೆ ಅವಕಾಶಗಳನ್ನು ನೀಡದಿರಲು ಪ್ರಯತ್ನಿಸಿದರೆ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ’ ಎಂದು ಅವರು ಹೇಳಿದರು.

ತಂಡದ ರಕ್ಷಣಾ ವಿಭಾಗವೂ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಈ ವರೆಗೆ ಏಳು ಗೋಲುಗಳನ್ನು ಅದು ಬಿಟ್ಟುಕೊಟ್ಟಿದೆ. ಅವುಗಳ ಪೈಕಿ ನಾಲ್ಕು ಗೋಲುಗಳು ಸೆಟ್‌ಪೀಸ್‌ಗಳ ಮೂಲಕ ಬಂದಿದ್ದವು. ಪ್ರತಿ ಪಂದ್ಯದಲ್ಲೂ ಕನಿಷ್ಠ ಒಂದು ಗೋಲನ್ನು ತಂಡ ಬಿಟ್ಟುಕೊಟ್ಟಿದೆ.

ಬಿಎಫ್‌ಸಿ ಈ ಬಾರಿ ಸೆಟ್‌ಪೀಸ್‌ಗಳ ಮೂಲಕ ಹೆಚ್ಚು ಗೋಲುಗಳನ್ನು ಗಳಿಸಿದೆ. ಮೂರು ಗೋಲುಗಳನ್ನು ಥ್ರೋ–ಇನ್‌ ಮೂಲಕ ಗಳಿಸಿದೆ. ಹೀಗಾಗಿ ಒಡಿಶಾದ ರಕ್ಷಣಾ ಗೋಡೆಯನ್ನು ಸುಲಭವಾಗಿ ಕೆಡಹುವ ಭರವಸೆಯಲ್ಲಿದೆ. ಕೇರಳ ಬ್ಲಾಸ್ಟರ್ಸ್‌ ಎದುರಿನ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆದ್ದಿರುವ ಕಾರಣ ತಂಡದ ಭರವಸೆ ಇಮ್ಮಡಿಯಾಗಿದೆ. ಸುನಿಲ್ ಚೆಟ್ರಿ ಮತ್ತು ಕ್ಲೀಟನ್ ಸಿಲ್ವಾ ಅವರು ಕೊನೆಗೂ ಲಯಕ್ಕೆ ಮರಳಿದ್ದು ತಂಡದ ನಿರೀಕ್ಷೆಗಳು ಗರಿಗೆದರುವಂತೆ ಮಾಡಿವೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ರೀತಿಯಲ್ಲೇ ಒಡಿಶಾ ಎದುರು ಕೂಡ ಆಡಲು ತಂಡಕ್ಕೆ ಸಾಧ್ಯವಾಗಲಿದೆ ಎಂಬುದು ಕೋಚ್ ಕಾರ್ಲಸ್ ಕ್ವದ್ರತ್ ಅವರ ವಿಶ್ವಾಸದ ನುಡಿ.

‘ತಂಡದ ಆಟಗಾರರು ಜಯ ಗಳಿಸುವ ಅವಕಾಶವನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಾರರು. ಪ್ರತಿ ಪಂದ್ಯದಲ್ಲೂ ಮೂರು ಪಾಯಿಂಟ್‌ ಗಳಿಸುವುದೇ ನಮ್ಮ ಗುರಿ. ಯಾವುದೇ ತಂಡವನ್ನೂ ಮಣಿಸುವ ಸಾಮರ್ಥ್ಯ ತಂಡಕ್ಕೆ ಇದೆ. ಒಡಿಶಾ ಬಲಿಷ್ಠ ತಂಡ ಎಂಬುದು ನಮಗೆ ತಿಳಿದಿದೆ. ಆ ತಂಡದವರು ಈಗ ಪೂರ್ಣ ಪಾಯಿಂಟ್‌ಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ಪ್ರಬಲ ಆಟವಾಡುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಆಡಲಿದ್ದೇವೆ’ ಎಂದು ಕ್ವದ್ರತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.