ADVERTISEMENT

ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿ: ದಶಕದ ನಂತರ ಬ್ರೆಜಿಲ್ ಮುಡಿಗೆ ಪ್ರಶಸ್ತಿ

ಪೆರು ತಂಡಕ್ಕೆ 1–3 ಗೋಲುಗಳ ಅಂತರದ ಸೋಲು

ಏಜೆನ್ಸೀಸ್
Published 8 ಜುಲೈ 2019, 19:55 IST
Last Updated 8 ಜುಲೈ 2019, 19:55 IST
ಅಂತಿಮ ನಿಮಿಷದಲ್ಲಿ ಗೋಲು ಗಳಿಸಿದ ಬ್ರೆಜಿಲ್‌ನ ರಿಚರ್ಲಿಸನ್ ಸಂಭ್ರಮಿಸಿದ ಪರಿ –ಪಿಟಿಐ ಚಿತ್ರ
ಅಂತಿಮ ನಿಮಿಷದಲ್ಲಿ ಗೋಲು ಗಳಿಸಿದ ಬ್ರೆಜಿಲ್‌ನ ರಿಚರ್ಲಿಸನ್ ಸಂಭ್ರಮಿಸಿದ ಪರಿ –ಪಿಟಿಐ ಚಿತ್ರ   

ರಿಯೊ ಡಿ ಜನೈರೊ: ನಾಟಕೀಯ ಮತ್ತು ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಫೈನಲ್‌ ಪಂದ್ಯದಲ್ಲಿ ಪೆರು ವಿರುದ್ಧ 3–1ರಿಂದ ಗೆದ್ದ ಬ್ರೆಜಿಲ್‌ ತಂಡದವರು ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.

ಇಲ್ಲಿನ ಮರಕಾನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಮುಗಿಯಲು 20 ನಿಮಿಷ ಬಾಕಿ ಇದ್ದಾಗ ಬ್ರೆಜಿಲ್‌ನ ಗ್ಯಾಬ್ರಿಯೆಲ್ ಜೀಸಸ್ ರೆಡ್ ಕಾರ್ಡ್ ‍ಪಡೆದು ಅಂಗಣ ತೊರೆದರು. ಹೀಗಾಗಿ ತಂಡ 10 ಮಂದಿಯ ಬಲದಲ್ಲಿ ಆಡಿತ್ತು. ಆದರೂ ಛಲ ಬಿಡದೆ ಕಾದಾಡಿತು. 12 ವರ್ಷಗಳ ನಂತರ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ಇದು ಕೊಪಾ ಅಮೆರಿಕ ಟೂರ್ನಿಯಲ್ಲಿ ತಂಡ ಗೆದ್ದ ಒಂಬತ್ತನೇ ಪ್ರಶಸ್ತಿಯಾಗಿದೆ.

ಆಕ್ರಮಣಕಾರಿ ಆಟವಾಡಿದ ಬ್ರೆಜಿಲ್‌ಗೆ 15ನೇ ನಿಮಿಷದಲ್ಲಿ ಎವರ್ಟನ್ ಗೋಲು ಗಳಿಸಿಕೊಟ್ಟರು. ಇನ್ನೇನು ಮೊದಲಾರ್ಧ ಮುಕ್ತಾಯದ ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಪಂದ್ಯ ರೋಮಾಂಚಕವಾಯಿತು. 44ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಗುರೇರಿ ಅವರು ಪೆರು ತಂಡಕ್ಕೆ ಸಮಬಲ ಗಳಿಸಿಕೊಟ್ಟರು. ಮೊದಲಾರ್ಧದ ಹೆಚ್ಚುವರಿ ಅವಧಿಯಲ್ಲಿ (45+3) ಸ್ಟ್ರೈಕರ್ ಗ್ಯಾಬ್ರಿಯಲ್ ಜೀಸಸ್‌ ಗಳಿಸಿದ ಗೋಲಿನ ಮೂಲಕ ಬ್ರೆಜಿಲ್ 2–1ರ ಮುನ್ನಡೆ ಸಾಧಿಸಿತು.

ADVERTISEMENT

ಆದರೆ 70ನೇ ನಿಮಿಷದಲ್ಲಿ ಗ್ಯಾಬ್ರಿಯೆಲ್‌ ಎರಡನೇ ಬಾರಿ ಗಂಭೀರ ತಪ್ಪೆಸಗಿದ ಕಾರಣ ರೆಫರಿಯ ಕೆಂಗಣ್ಣಿಗೆ ಗುರಿಯಾದರು. ಕಣ್ಣೀರು ಹಾಕುತ್ತ ಅಂಗಣದಿಂದ ಹೊರಗೆ ಹೋದ ಅವರು ವಿಶಿಷ್ಟ ಭಂಗಿಗಳನ್ನು ತೋರುತ್ತ, ದಾರಿಯಲ್ಲಿದ್ದ ನೀರಿನ ಬಾಟಲ್ ಒದ್ದು ಕೋಪ ಹೊರಗೆಡವಿದರು.

ಇದರ ನಂತರ ಬ್ರೆಜಿಲ್‌ನ ಆಕ್ರಮಣ ಹೆಚ್ಚಿತು. ಪೆರು ಕೂಡ ತಿರುಗೇಟು ನೀಡಲು ಪ್ರಯತ್ನಿಸಿತು. ಹೀಗಾಗಿ ಪಂದ್ಯ ರೋಚಕವಾಯಿತು. ಸಮಬಲ ಸಾಧಿಸಲು ಪೆರು ನಡೆಸಿದ ಪ್ರಯತ್ನಗಳೆಲ್ಲವೂ ಬ್ರೆಜಿಲ್ ಆಟದ ಮುಂದೆ ಮಂಕಾದವು. ಅಂತಿಮ ನಿಮಿಷದಲ್ಲಿ ರಿಚರ್ಲಿಸನ್ ಎದುರಾಳಿಗಳ ಸೋಲಿನ ಅಂತರವನ್ನು ಹೆಚ್ಚಿಸಿದರು.

ಆಕ್ರಮಣ, ತಂತ್ರಗಾರಿಕೆಯ ಆಟ:ಪಂದ್ಯದುದ್ದಕ್ಕೂ ಬ್ರೆಜಿಲ್ ಆಕ್ರಮಣಕಾರಿ ಮತ್ತು ತಂತ್ರಗಾರಿಕೆಯ ಆಟದ ಮೂಲಕ ಗಮನ ಸೆಳೆಯಿತು. ಹೀಗಾಗಿ ಪೆರು ವಿಚಲಿತವಾಯಿತು. ಮೊದಲ ಗೋಲಿನಲ್ಲಿ ಜೀಸಸ್ ಮಹತ್ವದ ಪಾತ್ರ ವಹಿಸಿದ್ದರು. ಇಬ್ಬರು ಡಿಫೆಂಡರ್‌ಗಳನ್ನು ವಂಚಿಸಿ ಚೆಂಡನ್ನು ಸಹ ಆಟಗಾರನತ್ತ ಕಳುಹಿಸಿದರು. ಎವರ್ಟನ್ ಚಾಣಾಕ್ಷಣತನದಿಂದ ಅದನ್ನು ಗುರಿಯತ್ತ ಒದ್ದರು.

ನಂತರ ಪೆರು ಕೂಡ ಉತ್ತಮ ಆಟವಾಡಿ ಗಮನ ಸೆಳೆಯಿತು. ಆಕ್ರಮಣಕ್ಕೆ ಒತ್ತು ನೀಡಿ ಪೆನಾಲ್ಟಿ ಅವಕಾಶವನ್ನು ಗಳಿಸಿಕೊಂಡಿತು. ವಿಎಆರ್‌ ಮೂಲಕ ಪೆನಾಲ್ಟಿಯನ್ನು ಖಾತರಿಪಡಿಸಿಕೊಂಡ ತಂಡ ಸಮಬಲ ಸಾಧಿಸುವಲ್ಲಿಯೂ ಸಫಲವಾಯಿತು.

ದ್ವಿತೀಯಾರ್ಧದ ಆರಂಭದಲ್ಲಿ ಲಭಿಸಿದ ಕೆಲವು ಅವಕಾಶಗಳನ್ನು ಬ್ರೆಜಿಲ್‌ನ ಸಿಲ್ವಾ, ಡ್ಯಾನಿ ಆಲ್ವಸ್ ಮತ್ತು ಕುಟಿನ್ಹೊ ಕೈಚೆಲ್ಲಿದರು. ಆದರೂ ತಂಡ ಜಯವನ್ನು ಕೈಚೆಲ್ಲಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.