ADVERTISEMENT

ಕೊರೊನಾ ಸೋಂಕಿತರಿಗೆ ನೆರವು: ರೊನಾಲ್ಡೊ ಮಾಲೀಕತ್ವದ ಹೋಟೆಲ್‌ಗಳೀಗ ಆಸ್ಪತ್ರೆಗಳು!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 5:52 IST
Last Updated 16 ಮಾರ್ಚ್ 2020, 5:52 IST
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ   

ಬೆಂಗಳೂರು: ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದು, ಇದಕ್ಕಾಗಿ ತಮ್ಮ ಮಾಲೀಕತ್ವದ ‘ಪೆಸ್ತಾನಾ ಸಿಆರ್‌ 7’ ಹೋಟೆಲ್‌ಗಳನ್ನೆಲ್ಲಾ ಆಸ್ಪತ್ರೆಗಳಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ಸ್ಪೇನ್‌ನ ಮಾರ್ಕಾ ದಿನಪತ್ರಿಕೆ ಈ ಕುರಿತು ಸುದ್ದಿ ಪ್ರಕಟಿಸಿದೆ. ರೊನಾಲ್ಡೊ ಅವರು ಪ್ರತಿನಿಧಿಸುವ ಯುವೆಂಟಸ್‌ ಕ್ಲಬ್‌ ಕೂಡ ಈ ಸುದ್ದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ರೊನಾಲ್ಡೊ ನಿರ್ಧರಿಸಿದ್ದು, ವೈದ್ಯರು, ಶುಶ್ರೂಷಕರು ಹಾಗೂ ಇತರೆ ಸಿಬ್ಬಂದಿಗಳಿಗೆ ತಗಲುವ ವೆಚ್ಚವನ್ನು ತಾವೇ ಭರಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

‘ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಮನುಷ್ಯರ ಪ್ರಾಣ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕೋವಿಡ್‌–19ನಿಂದಾಗಿ ಹಲವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕರುಣಿಸಲಿ. ಯುವೆಂಟಸ್‌ ತಂಡದಲ್ಲಿ ನನ್ನ ಜೊತೆ ಆಡುವ ಡೇನಿಯಲ್‌ ರುಗಾನಿ ಸೇರಿದಂತೆ ಅನೇಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅವರೆಲ್ಲರೂ ಧೈರ್ಯ ತಂದುಕೊಳ್ಳಲಿ. ಇತರರ ಜೀವವನ್ನು ಉಳಿಸಲು ವೈದ್ಯರು ಮತ್ತು ಇತರ ಸಿಬ್ಬಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಅವರಿಗೆಲ್ಲಾ ನನ್ನ ಬೆಂಬಲ ಇದೆ’ ಎಂದು ರೊನಾಲ್ಡೊ, ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಕ್ಲೀವ್‌ಲ್ಯಾಂಡ್‌ ಕ್ಯಾವಲಿಯರ್ಸ್‌ ತಂಡದ ಕೆವಿನ್‌ ಲವ್‌, ನ್ಯೂ ಒರ್ಲೀನ್ಸ್‌ ಪೆಲಿಕಾನ್ಸ್‌ ತಂಡದ ಜಿಯೊನ್‌ ವಿಲಿಯಮ್ಸನ್‌, ಡೆರೋಯಿಟ್‌ ಪಿಸ್ಟನ್ಸ್‌ ತಂಡದ ಬ್ಲೇಕ್‌ ಗಿಫಿನ್ಸ್‌ ಸೇರಿದಂತೆ ಅಮೆರಿಕದ ಹಲವು ಬ್ಯಾಸ್ಕೆಟ್‌ಬಾಲ್‌ ಆಟಗಾರರು ಕೋವಿಡ್‌–19ನಿಂದ ಬಳಲುತ್ತಿರುವವರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.