
ಪೋಖರಾ (ನೇಪಾಳ): ಭಾರತ 17 ವರ್ಷದೊಳಗಿನವರ ಬಾಲಕಿಯರ ತಂಡವು ಸೋಮವಾರ ನಡೆದ ಸ್ಯಾಫ್ (ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್) 19 ವರ್ಷದೊಳಗಿನ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 0–2 ಗೋಲುಗಳಿಂದ ಬಾಂಗ್ಲಾದೇಶ ತಂಡಕ್ಕೆ ಮಣಿಯಿತು.
ಪೋಖರಾ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅರ್ಪಿತಾ ಬಿಸ್ವಾಸ್ (29ನೇ ನಿಮಿಷ) ಮತ್ತು ಅಲ್ಪಿ ಅಕ್ಟರ್ (40ನೇ) ಅವರು ಬಾಂಗ್ಲಾದೇಶ ಪರ ಗೋಲು ದಾಖಲಿಸಿದರು.
ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಬಾಂಗ್ಲಾ ತಂಡವು ಫೈನಲ್ ಪ್ರವೇಶಿಸಿತು. ಶನಿವಾರ 12–0ಯಿಂದ ಭೂತಾನ್ ವಿರುದ್ಧ ಗೆಲುವು ಸಾಧಿಸಿತ್ತು. ಭಾರತ 1–0ಯಿಂದ ನೇಪಾಳ ತಂಡವನ್ನು ಮಣಿಸಿತ್ತು.
ಎಎಫ್‌ಸಿ 17 ವರ್ಷದೊಳಗಿನ ಬಾಲಕಿಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯು ಇದೇ ವರ್ಷ ಚೀನಾದಲ್ಲಿ ನಡೆಯಲಿದೆ. ಅದರ ತಯಾರಿಯ ಭಾಗವಾಗಿ ಭಾರತ ತಂಡವು ನಿಗದಿತ ವಯೋಮಾನಕ್ಕಿಂತ ಎರಡು ವರ್ಷ ಕಿರಿಯ ಆಟಗಾರ್ತಿಯರನ್ನು ಕಣಕ್ಕಿಳಿಸಿದೆ.
ನೇಪಾಳ ವಿರುದ್ಧದ ಪಂದ್ಯದ ಬಳಿಕ ಆರಂಭಿಕ 11ರ ತಂಡದಲ್ಲಿ ಮುಖ್ಯ ಕೋಚ್ ಪಮೇಲಾ ಕಾಂಟಿ ಎರಡು ಬದಲಾವಣೆ ಮಾಡಿದ್ದರು. ಅನುಷ್ಕಾ ಕುಮಾರಿ ಬದಲಿಗೆ ತಂಡಮೋನಿ ಬಾಸ್ಕಿ ಮಿಡ್‌ಫೀಲ್ಡ್‌ನಲ್ಲಿ ಆಡಿದರೆ, ಫಾರ್ವರ್ಡ್ ಆಟಗಾರ್ತಿ ವಲೈನಾ ಫೆರ್ನಾಂಡಿಸ್ ಬದಲಿಗೆ ಪ್ರೀತಿಕಾ ಬರ್ಮನ್ ಅವಕಾಶ ಪಡೆದರು.
ನಾಲ್ಕು ತಂಡಗಳಿರುವ ಟೂರ್ನಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ. ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡವು ಭೂತಾನ್ ವಿರುದ್ಧ ಜಯ ಸಾಧಿಸಿದರೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.