ADVERTISEMENT

ಸ್ಯಾಫ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ಐದನೇ ಪ್ರಶಸ್ತಿಯ ಕನಸು

ಆತಿಥೇಯರ ವಿರುದ್ಧ ಫೈನಲ್ ಹಣಾಹಣಿ

ಪಿಟಿಐ
Published 21 ಮಾರ್ಚ್ 2019, 20:25 IST
Last Updated 21 ಮಾರ್ಚ್ 2019, 20:25 IST
ಫೈನಲ್ ಪಂದ್ಯದ ಮುನ್ನಾ ದಿನವಾದ ಗುರುವಾರ ಅಭ್ಯಾಸದ ನಂತರ ಭಾರತ ತಂಡದ ಆಟಗಾರ್ತಿಯರು ಹೋಳಿ ಆಡಿ ಸಂಭ್ರಮಿಸಿದರು –ಟ್ವಿಟರ್ ಚಿತ್ರ
ಫೈನಲ್ ಪಂದ್ಯದ ಮುನ್ನಾ ದಿನವಾದ ಗುರುವಾರ ಅಭ್ಯಾಸದ ನಂತರ ಭಾರತ ತಂಡದ ಆಟಗಾರ್ತಿಯರು ಹೋಳಿ ಆಡಿ ಸಂಭ್ರಮಿಸಿದರು –ಟ್ವಿಟರ್ ಚಿತ್ರ   

ಬಿರಾತ್‌ನಗರ: ಸತತ ಐದನೇ ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿರುವ ಭಾರತ ತಂಡದವರು ಮಹಿಳೆಯರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಶುಕ್ರವಾರ ಆತಿಥೇಯ ನೇಪಾಳವನ್ನು ಎದುರಿಸುವರು.

ಸ್ಯಾಫ್ ಚಾಂಪಿಯನ್‌ಷಿಪ್ ಆರಂಭ ಗೊಂಡ ನಂತರ ಭಾರತ ಒಮ್ಮೆಯೂ ಪ್ರಶಸ್ತಿ ಕೈಚೆಲ್ಲಲಿಲ್ಲ. ಈ ಬಾರಿಯೂ ಉತ್ತಮ ಸಾಮರ್ಥ್ಯ ಮೆರೆದಿದೆ. ಹೀಗಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೆನಿಸಿಕೊಂಡಿದೆ.

ಗುಂಪು ಹಂತದಲ್ಲಿ ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದಿದ್ದ ತಂಡ ಸೆಮಿಫೈನಲ್‌ನಲ್ಲಿ ಎದುರಾಳಿ ಬಾಂಗ್ಲಾದೇಶವನ್ನು 4–0 ಗೋಲುಗಳಿಂದ ಮಣಿಸಿತ್ತು.

ADVERTISEMENT

ತವರಿನ ಪ್ರೇಕ್ಷಕರ ಬೆಂಬಲದಲ್ಲಿ ನೇಪಾಳ ಕೂಡ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಈ ತಂಡವೂ ಸೆಮಿಫೈನಲ್‌ನಲ್ಲಿ ಶ್ರೀಲಂಕಾವನ್ನು 4–0ಯಿಂದ ಸೋಲಿಸಿತ್ತು.

ಆದರೆ ಒಟ್ಟಾರೆ ಗೋಲು ಗಳಿಕೆಯಲ್ಲಿ ಆತಿಥೇಯರು ಭಾರತದಷ್ಟು ಸಾಧನೆ ಮಾಡಲಿಲ್ಲ. ಭಾರತ ಮೂರು ಪಂದ್ಯಗಳಲ್ಲಿ 15 ಗೋಲುಗಳನ್ನು ಗಳಿಸಿದ್ದರೆ ನೇಪಾಳ ಇಷ್ಟೇ ಪಂದ್ಯಗಳಲ್ಲಿ 10 ಗೋಲು ಗಳಿಸಿದೆ.

ಆಕ್ರಮಣ ಮತ್ತು ರಕ್ಷಣಾ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ. ಎದುರಾಳಿ ತಂಡ ಯಾವುದೇ ಆಗಿರಲಿ, ಸುಲಭವಾಗಿ ಗೋಲು ಗಳಿಸುವ ಕಲೆ ಅದಿತಿ ಚೌಹಾಣ್‌ ಬಳಗಕ್ಕೆ ಕರಗತವಾಗಿದೆ.

ಫಾರ್ವರ್ಡ್ ವಿಭಾಗದಲ್ಲಿ ರತನ್‌ಬಾಲಾ ದೇವಿ, ಡಂಗ್ಮಿ ಗ್ರೇಸ್‌, ಸಂಧ್ಯಾ ರಂಗನಾಥನ್‌ ಮುಂತಾದವರು ಅಮೋಘ ಸಾಧನೆ ಮಾಡಿದ್ದಾರೆ. ಮಿಡ್‌ಫೀಲ್ಡರ್‌ ಸಂಜು ಯಾದವ್ ಎಲ್ಲ ಪಂದ್ಯಗಳಲ್ಲೂ ಚಾಕಚಕ್ಯತೆ ಮೆರೆದು ಗೋಲು ಗಳಿಸಲು ಅವಕಾಶ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ದಾಲಿಮಾ ಚಿಬ್ಬೇರ್‌, ಜಪಮಣಿ ಟುಡು ಮತ್ತು ಸ್ವೀಟಿ ದೇವಿ ರಕ್ಷಣಾ ವಿಭಾಗದಲ್ಲಿ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಫೈನಲ್‌ನಲ್ಲಿ ನೇಪಾಳದ ಫಾರ್ವರ್ಡ್‌ ಆಟಗಾರ್ತಿಯರನ್ನು ನಿಯಂತ್ರಿಸಲು ಸಾಧ್ಯವಾಗುವ ಭರವಸೆಯಲ್ಲಿದ್ದಾರೆ ಇವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.