ADVERTISEMENT

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ಜಹೀರ್ ಖಾನ್ ಅವಳಿ ಗೋಲು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
ಸರ್ವಿಸಸ್‌ನ ಕೆ. ಜಹೀರ್ ಖಾನ್ (ಎಡ) ಮತ್ತು ಕರ್ನಾಟಕದ ರಾಜಿಲ್ ಸಾಜಿ ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.
ಸರ್ವಿಸಸ್‌ನ ಕೆ. ಜಹೀರ್ ಖಾನ್ (ಎಡ) ಮತ್ತು ಕರ್ನಾಟಕದ ರಾಜಿಲ್ ಸಾಜಿ ಚೆಂಡಿಗಾಗಿ ಸೆಣಸಾಟ ನಡೆಸಿದರು –ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.   

ಬೆಂಗಳೂರು: ಕೆ. ಜಹೀರ್ ಖಾನ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಸರ್ವಿಸಸ್‌ ತಂಡವು ‘ಸಂತೋಷ್‌ ಟ್ರೋಫಿ’ಗಾಗಿ ನಡೆಯುತ್ತಿರುವ 79ನೇ ಸೀನಿಯರ್‌ ಪುರುಷರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 2–1ರಿಂದ ಕರ್ನಾಟಕ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅರ್ಹತಾ ಸುತ್ತಿನ ‘ಎಚ್‌’ ಗುಂಪಿನ ಪಂದ್ಯದಲ್ಲಿ ಆತಿಥೇಯ ತಂಡದ ಪರ ಎಂ. ಲೂಯಿಸ್ ನಿಕ್ಸನ್ ಏಕೈಕ ಗೋಲು ದಾಖಲಿಸಿದರು. ಲಕ್ಷದ್ವೀಪ ತಂಡವನ್ನು 3–0ಯಿಂದ ಮಣಿಸಿ ಅಭಿಯಾನ ಆರಂಭಿಸಿದ್ದ ಕರ್ನಾಟಕ ತಂಡಕ್ಕೆ ನಿರಾಸೆಯಾಯಿತು.

ಆಡಿರುವ ಎರಡೂ ಪಂದ್ಯಗಳನ್ನು ಗೆದ್ದ ಸರ್ವಿಸಸ್‌ ಆರು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮುಂದಿನ ಹಂತಕ್ಕೆ ಸನಿಹವಾಗಿದೆ. ಕರ್ನಾಟಕ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತಲಾ ಒಂದು ಅಂಕ ಗಳಿಸಿರುವ ಲಕ್ಷದ್ವೀಪ ಮತ್ತು ಗೋವಾ ತಂಡಗಳು ನಂತರದ ಸ್ಥಾನದಲ್ಲಿವೆ. ನಾಲ್ಕೂ ತಂಡಗಳಿಗೆ ತಲಾ ಒಂದು ಪಂದ್ಯಗಳು ಬಾಕಿ ಉಳಿದಿವೆ.

ADVERTISEMENT

ಎಂ. ಗೋವಿಂದರಾಜು ರಾಮಚಂದ್ರನ್ ಮಾರ್ಗದರ್ಶನದ ಸರ್ವಿಸಸ್‌ ತಂಡವು ಪಂದ್ಯದ ಎಂಟನೇ ನಿಮಿಷದಲ್ಲೇ ಮುನ್ನಡೆ ಗಳಿಸಿತು. ಪೆನಾಲ್ಟಿ ಅವಕಾಶವನ್ನು ಜಹೀರ್‌ ಅವರು ಗೋಲಾಗಿ ಪರಿವರ್ತಿಸಿದರು. ಅದಾದ ಏಳು ನಿಮಿಷಗಳಲ್ಲಿ ಶುಭಂ ರಾಣಾ ಅವರು ಚೆಂಡನ್ನು ನಿಖರವಾಗಿ ಲಾಫ್ಟ್ ಮಾಡಿದರು. ತಡಮಾಡದ ಜಹೀರ್, ಹೆಡ್ಡರ್ ಮೂಲಕ ಚೆಂಡನ್ನು ಗುರಿ ಸೇರಿಸಿದರು. ಇದರೊಂದಿಗೆ ಸರ್ವಿಸಸ್‌ 15ನೇ ನಿಮಿಷದಲ್ಲೇ 2–0 ಮುನ್ನಡೆ ಪಡೆಯಿತು.

ಬಳಿಕ ತೀವ್ರ ಒತ್ತಡಕ್ಕೆ ಒಳಗಾದ ಆತಿಥೇಯ ತಂಡವು ತಿರುಗೇಟು ನೀಡುವ ಪ್ರಯತ್ನ ನಡೆಸಿತು. ಆದರೆ, ಎದುರಾಳಿ ತಂಡದ ಬಲಿಷ್ಠ ರಕ್ಷಣಾ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ. ಆಟ ಕೈಜಾರಿ ಹೋಗುತ್ತಿದ್ದಂತೆ ಕರ್ನಾಟಕದ ಕೋಚ್‌ ರವಿ ಬಾಬು ರಾಜು ಅವರು ನಿಖಿಲ್ ರಾಜ್‌ ಬದಲು ಬೆಂಗಳೂರು ಎಫ್‌ಸಿಯ ಶ್ರೇಯಸ್ ಕೇತ್ಕರ್ ಅವರನ್ನು ಕಣಕ್ಕಿಳಿಸಿದರು. 

ಲಕ್ಷದ್ವೀಪ ವಿರುದ್ಧದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಲೂಯಿಸ್ ಅವರು ರೋಮಾಂಚಕ ಸ್ಟ್ರೈಕ್ ಮೂಲಕ ಕರ್ನಾಟಕಕ್ಕೆ ಭರವಸೆ ಮೂಡಿಸಿದರು. 68ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲಿನಿಂದ ಆತಿಥೇಯ ತಂಡಕ್ಕೆ ಸಮಬಲ ಸಾಧಿಸಲು ಸ್ವಲ್ಪ ಸಮಯ ಸಿಕ್ಕಿತು. 

ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಂತೆ ಆತಿಥೇಯರು ಚೆಂಡನ್ನು ಗುರಿ ಸೇರಿಸಿ, ಸಮಬಲ ಸಾಧಿಸಿದ ಸಂಭ್ರಮದಲ್ಲಿ ತೇಲಾಡಿದರು. ಆದರೆ, ಅದನ್ನು ‘ಫೌಲ್‌’ ಎಂದು ರೆಫ್ರಿ ಘೋಷಿಸಿದ್ದರಿಂದ ಮೈದಾನದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. 

ದಿನದ ಇನ್ನೊಂದು ಪಂದ್ಯದಲ್ಲಿ ಲಕ್ಷದ್ವೀಪ ಮತ್ತು ಗೋವಾ ತಂಡಗಳು 1–1ರಿಂದ ಡ್ರಾ ಸಾಧಿಸಿದವು. ಬುಧವಾರ ಕರ್ನಾಟಕ ತಂಡವು ಗೋವಾ ವಿರುದ್ಧ; ಸರ್ವಿಸಸ್‌ ತಂಡವು ಲಕ್ಷದ್ವೀಪ ವಿರುದ್ಧ ತಮ್ಮ ಕೊನೆಯ ಗುಂಪಿನ ಪಂದ್ಯವನ್ನು ಆಡಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.