ADVERTISEMENT

ಕಾಲ್ಚಳಕದ ಮೋಡಿ ಮಾಡಿದ ಹಿರಿಯರು

ವಯಸ್ಸು ಮರೆತು ಫುಟ್‌ಬಾಲ್ ಆಡಿದ ಐಟಿಐ–ಎಚ್‌ಎಎಲ್‌ ತಂಡಗಳ ಆಟಗಾರರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 16:34 IST
Last Updated 19 ಜನವರಿ 2019, 16:34 IST
ಪಂದ್ಯ ಗೆದ್ದ ಐಟಿಐ ತಂಡ. ನಿಂತವರು (ಎಡದಿಂದ): ಸತ್ಯನ್‌ (ಸಹಾಯಕ ಕೋಚ್‌), ಮಹೇಂದ್ರ ಮಣಿ, ಇಲಿಯಾಸ್ ಪಾಷ, ಶರವಣನ್‌, ಕಾಂತರಾಜ್‌ (ಕೋಚ್‌), ಆರ್‌.ಜಾನಕಿರಾಜನ್‌ (ಮ್ಯಾನೇಜರ್‌), ಸುರೇಶ್‌ (ಕ್ರೀಡಾ ವಿಭಾಗದ ಅಧ್ಯಕ್ಷ), ಮುರಳಿಧರನ್‌, ಸೋಲಮನ್ ರಾಜ್‌, ಲೂಯಿಸ್ ನಿಕ್ಸನ್‌, ಆರ್.ಕುಮಾರ್‌. ಕುಳಿತವರು: ಬಾಲಾಜಿ ನರಸಿಂಹನ್‌ (ಗೋಲ್‌ ಕೀಪರ್‌), ಇಂದ್ರಜಿತ್‌, ಅಣ್ಣಪ್ಪ, ಬಿ.ಸತ್ಯನ್‌, ಆ್ಯಂಡ್ರ್ಯೂ, ಸಂತೋಷ್‌ ಕುಮಾರ್‌, ಆರ್‌.ಸಿ.ಪ್ರಕಾಶ್‌, ಸುನಿಲ್‌

ಬೆಂಗಳೂರು: ಮಿರುಗುವ ಬೆಳ್ಳಿಕೂದಲು, ಬಿಳಿ ಗಡ್ಡ. ದೇಹಕ್ಕೆ ವಯಸ್ಸಾಗಿದ್ದರೂ ದೇಹಭಾಷೆಯಲ್ಲಿ ತುಳುಕಿದ ಯೌವನ. ತುಡಿಯುವ ಉತ್ಸಾಹ; ಮನಸ್ಸಿನಲ್ಲಿ ಉಲ್ಲಾಸ.

ಅಶೋಕ ನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಹಿರಿಯರ ಫುಟ್‌ಬಾಲ್‌ ಪಂದ್ಯದಲ್ಲಿ ಆಡಿದ ಹಿರಿಯರು ವಯಸ್ಸು ಮರೆತು ಸಾಮರ್ಥ್ಯ ಮೆರೆದರು. ಗ್ಯಾಲರಿಗಳಲ್ಲಿ ಕುಳಿತಿದ್ದ ಆಯಾ ಕಂಪನಿಗಳ ಬೆಂಬಲಿಗರು ಮತ್ತು ಆಟಗಾರರ ಅಭಿಮಾನಿಗಳು ಕ್ಷಣ ಕ್ಷಣವೂ ಕುಣಿದು ಕುಪ್ಪಳಿಸಿದರು.

ಪ್ರತಿ ವರ್ಷ ನಡೆಯುವ ಹಿರಿಯರ ಫುಟ್‌ಬಾಲ್ ಪಂದ್ಯವನ್ನು ಈ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್) ಮತ್ತು ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ (ಐಟಿಐ) ತಂಡಗಳ ನಡುವಿನ ಪಂದ್ಯ ಆರಂಭದಿಂದ ಅಂತ್ಯದ ವರೆಗೂ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ದ್ವಿತೀಯಾರ್ಧದಲ್ಲಿ ಗೋಲುಗಳನ್ನು ದಾಖಲಿಸಿದ ಐಟಿಐ ಗೆಲುವು ಸಾಧಿಸಿತು.

ADVERTISEMENT

ವಿಜಯಿ ತಂಡಕ್ಕೆ ₹ 25 ಸಾವಿರ ಮತ್ತು ಸೋತ ತಂಡಕ್ಕೆ ₹ 15 ಸಾವಿರ ನೀಡಲಾಯಿತು. ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದ ಆಟಗಾರರ ಸಂಭ್ರಮ ಇಮ್ಮಡಿಯಾಯಿತು.

ಗೋಲು ಗಳಿಸಿದ ಪ್ರಕಾಶ್‌:ಅನುಭವಿ ಆಟಗಾರರನ್ನು ಒಳಗೊಂಡ ಉಭಯ ತಂಡಗಳು ಆರಂಭದಿಂದಲೇ ಭಾರಿ ಪೈಪೋಟಿ ನಡೆಸಿದವು. ತಂತ್ರಕ್ಕೆ ಪ್ರತಿ ತಂತ್ರ ಹೂಡುತ್ತ ಸಾಗಿದ ಕಾರಣ ಮೊದಲಾರ್ಧದಲ್ಲಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಫಾರ್ವರ್ಡ್ ಆಟಗಾರ ಆರ್‌.ಸಿ.ಪ್ರಕಾಶ್ ಮಿಂಚಿದರು. 45ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಅವರು 15 ನಿಮಿಷಗಳ ಒಳಗೆ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿ ಐಟಿಐ ತಂಡದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.