ADVERTISEMENT

ಪೆನಾಲ್ಟಿ ಲಾಟರಿಯಂತೆ; ಅದು ಇಷ್ಟ ಇರಲಿಲ್ಲ: ಕೋಚ್‌ ಕಾರ್ಲ್ಸ್‌ ಕುದ್ರತ್‌

ತವರಿಗೆ ಮರಳಿದ ಐಎಸ್‌ಎಲ್‌ ಟೂರ್ನಿಯ ಚಾಂಪಿಯನ್‌ ತಂಡ ಬೆಂಗಳೂರು ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 19:17 IST
Last Updated 18 ಮಾರ್ಚ್ 2019, 19:17 IST
ಸೋಮವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಿಎಫ್‌ಸಿ ತಂಡದ ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್ ಸಂಧು (ಎಡ) ಮತ್ತು ನಾಯಕ ಸುನಿಲ್ ಚೆಟ್ರಿ ಅವರು ಟ್ರೋಫಿಯನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಸೋಮವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಿಎಫ್‌ಸಿ ತಂಡದ ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್ ಸಂಧು (ಎಡ) ಮತ್ತು ನಾಯಕ ಸುನಿಲ್ ಚೆಟ್ರಿ ಅವರು ಟ್ರೋಫಿಯನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಮುಂಬೈ: ‘ಪೆನಾಲ್ಟಿ ಲಾಟರಿ ಇದ್ದಂತೆ. ಅದು ಯಾರಿಗೂ ಒಲಿಯಬಹುದು. ಆದ್ದರಿಂದ ಪಂದ್ಯವನ್ನು ಅಲ್ಲಿಯವರೆಗೂ ಕೊಂಡೊಯ್ಯಲು ನಮಗೆ ಇಷ್ವ ಇರಲಿಲ್ಲ. ಕೊನೆಗೂ ಯೋಜನೆಯಂತೆ ಎಲ್ಲವೂ ನಡೆಯಿತು. ಪಂದ್ಯ ಗೆದ್ದೆವು; ಪ್ರಶಸ್ತಿ ಬಗಲಿಗೆ ಹಾಕಿಕೊಂಡೆವು...’

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ಭಾನುವಾರ ರಾತ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದ ಕೋಚ್‌ ಕಾರ್ಲ್ಸ್‌ ಕುದ್ರತ್‌ ಅವರ ಅಭಿಪ್ರಾಯ ಇದು.

ಎಫ್‌ಸಿ ಗೋವಾ ತಂಡದ ಎದುರು ನಡೆದ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ರಾಹುಲ್ ಭೆಕೆ ಗಳಿಸಿದ ಏಕೈಕ ಗೋಲಿನ ಬಲದಿಂದ ಬಿಎಫ್‌ಸಿ ಗೆಲುವು ಸಾಧಿಸಿತ್ತು. ಈ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಗೆದ್ದಿತ್ತು. ಲೀಗ್ ಹಂತದಲ್ಲಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದ ತಂಡವೊಂದು ಪ್ರಶಸ್ತಿ ಗೆದ್ದಿರುವುದು ಇದೇ ಮೊದಲು.

ADVERTISEMENT

‘ಫೈನಲ್‌ ಪಂದ್ಯದಲ್ಲಿ ಹೇಗೆ ಆಡಬೇಕೋ ಹಾಗೆಯೇ ಗೋವಾ ತಂಡ ಆಡಿತು. ಆದರೆ ನಮ್ಮ ತಂತ್ರಗಳು ಫಲ ನೀಡಿದವು. ಅದು, ರಾಹುಲ್ ಭೆಕೆ ಅವರ ಹೆಡರ್ ಮೂಲಕ ಪ್ರತಿಫಲನಗೊಂಡಿತು. ಐಎಸ್‌ಎಲ್‌ ಫೈನಲ್‌ನಲ್ಲಿ ಈ ವರೆಗೆ ಒಟ್ಟು 14 ಗೋಲುಗಳು ದಾಖಲಾಗಿವೆ. ಅದರ ಪೈಕಿ ರಾಹುಲ್ ಭೆಕೆ ಗಳಿಸಿದ ಗೋಲು ಶ್ರೇಷ್ಠವಾದದ್ದು’ ಎಂದು ಕುದ್ರತ್ ಹೇಳಿದರು.

‘ಕಣಕ್ಕೆ ಇಳಿಯುವ ತಂಡವನ್ನು ನಿರ್ಣಯಿಸುವಾಗ ಅನೇಕ ಸವಾಲುಗಳು ಇದ್ದವು. ಆಲ್ಬರ್ಟ್ ಸೆರಾನ್ ಅವರನ್ನು ಕೈಬಿಡುವ ನಿರ್ಧಾರ ಸವಾಲಿನದ್ದಾಗಿತ್ತು. ಕೊನೆಗೂ ಅದಕ್ಕೆ ಬದ್ಧವಾದೆವು. ಆಕ್ರಮಣಕಾರಿ ಆಟ ಆಡುವುದು ನಮ್ಮ ಉದ್ದೇಶವಾಗಿತ್ತು. ಈ ತಂತ್ರ ಕೊನೆಗೂ ಪರಿಣಾಮ ಬೀರಿತು’ ಎಂದು ಅವರು ವಿವರಿಸಿದರು.

ತಂಡಕ್ಕೆ ಅದ್ದೂರಿ ಸ್ವಾಗತ: ಸೋಮವಾರ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಿಎಫ್‌ಸಿ ಆಟಗಾರರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ಟ್ರೋಫಿ ಹಿಡಿದುಕೊಂಡು ಬಂದ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹಲವರು ಮುಗಿ ಬಿದ್ದರು.

ಕಂಠೀರವ ಕ್ರೀಡಾಂಗಣವೇ ಬೇಕು: ಚೆಟ್ರಿ

ಬಿಎಫ್‌ಸಿಗೆ ಅದೃಷ್ಟದ ಅಂಗಣವಾಗಿರುವ ಕಂಠೀರವ ಕ್ರೀಡಾಂಗಣದಲ್ಲೇ ಆಡಲು ಇಷ್ಟಪಡುತ್ತೇವೆ ಎಂದು ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದರು.

‘ಈ ಬಾರಿ ಕಂಠೀರವ ಕ್ರೀಡಾಂಗಣದಲ್ಲಿ ಬಿಎಫ್‌ಸಿ ಒಂದು ಪಂದ್ಯವನ್ನೂ ಸೋತಿಲ್ಲ. ಹೀಗಾಗಿ ಇದೇ ಕ್ರೀಡಾಂಗದಲ್ಲಿ ಕನಿಷ್ಠ ಐದು ವರ್ಷ ಆಡಲು ಬಯಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.