ADVERTISEMENT

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ | ಕೊನೆಗಳಿಗೆಯ ಗೋಲು: ಫೈನಲ್‌ಗೆ ಇಂಗ್ಲೆಂಡ್‌

ಏಜೆನ್ಸೀಸ್
Published 11 ಜುಲೈ 2024, 16:25 IST
Last Updated 11 ಜುಲೈ 2024, 16:25 IST
<div class="paragraphs"><p>ಕೊನೆಗಳಿಗೆಯ ಗೋಲು ಗಳಿಸಿದ ವಾಟ್ಕಿನ್ಸ್‌ ಸಂಭ್ರಮ..... </p></div>

ಕೊನೆಗಳಿಗೆಯ ಗೋಲು ಗಳಿಸಿದ ವಾಟ್ಕಿನ್ಸ್‌ ಸಂಭ್ರಮ.....

   

ಪಿಟಿಐ ಚಿತ್ರ

ಡೋರ್ಟ್‌ಮುಂಡ್‌: ‘ಇಂಜುರಿ ಟೈಮ್‌’ನಲ್ಲಿ ಸಬ್‌ಸ್ಟಿಟ್ಯೂಟ್‌ ಆಟಗಾರ ಓಲಿ ವಾಟ್ಕಿನ್ಸ್‌ ಗಳಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡ 2–1 ಗೋಲುಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಯುರೋಪಿಯನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ (ಯುರೊ 2024) ಸತತ ಎರಡನೇ ಬಾರಿ ಫೈನಲ್ ತಲುಪಿತು.

ADVERTISEMENT

ಗರೆತ್‌ ಸೌತ್‌ಗೇಟ್‌ ತರಬೇತಿಯ ಇಂಗ್ಲೆಂಡ್ ತಂಡ ಬರ್ಲಿನ್‌ನಲ್ಲಿ ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು ಎದುರಿಸಲಿದೆ.

ಪಂದ್ಯ 1–1 ಡ್ರಾ ಆಗಿ ಹೆಚ್ಚುವರಿ ಅವಧಿಯತ್ತ ಸಾಗುವಂತೆ ಕಂಡಾಗಲೇ, 80ನೇ ನಿಮಿಷ ಆಟಕ್ಕಿಳಿದಿದ್ದ ವಾಟ್ಕಿನ್ಸ್‌, ಇನ್ನೊಬ್ಬ ಸಬ್‌ಸ್ಟಿಟ್ಯೂಟ್‌ ಕೋಲ್‌ ಪಾಮರ್‌ ಅವರಿಂದ ಪಡೆದ ಉತ್ತಮ ಪಾಸ್‌ನಲ್ಲಿ ಚೆಂಡನ್ನು ಸಮೀಪದಿಂದ ಬಲವಾಗಿ ಒದ್ದು ಗೋಲಿನ ಮೂಲೆಗೆ ಸೇರಿಸಿದರು.

ನಾಯಕ ಹ್ಯಾರಿ ಕೇನ್ ಬದಲು ವಾಟ್ಕಿನ್ಸ್ ಕಣಕ್ಕಿಳಿದಿದ್ದರು. ಅವರು ಈ ಕೂಟದಲ್ಲಿ ಎರಡನೇ ಬಾರಿ ಸಬ್‌ಸ್ಟಿಟ್ಯೂಟ್‌ ಆಗಿ ಅಡುವ ಅವಕಾಶ ಪಡೆದರು.

21 ವರ್ಷದ ಕ್ಸೇವಿ ಸೈಮನ್ಸ್‌ ಏಳನೇ ನಿಮಿಷ ನೆದರ್ಲೆಂಡ್ಸ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಅವರು  40 ಗಜ ದೂರದಿಂದ ಗೋಲು ಹೊಡೆದು ಗಮನ ಸೆಳೆದರು. ಆದರೆ 18ನೇ ನಿಮಿಷ ಇಂಗ್ಲೆಂಡ್‌ ಸಮ ಮಾಡಿಕೊಂಡಿತು. ಹ್ಯಾರಿ ಕೇನ್ ‘ಪೆನಾಲ್ಟಿ’ ಮೂಲಕ ಗೋಲು ಗಳಿಸಿದರು.

ವಿರಾಮದ ನಂತರ ಡಚ್‌ ಆಟಗಾರರು ಮೇಲುಗೈ ಸಾಧಿಸಿದರೂ, ಒಂದೂ ಅವಕಾಶ ಗೋಲಾಗಿ ಪರಿವರ್ತನೆ ಆಗಲಿಲ್ಲ.

ಇಂಗ್ಲೆಂಡ್ ಅಭಿಮಾನಿಗಳು ಈಗ ದೀರ್ಘ ಕಾಲದ ನಂತರ ಮೊದಲ ಪ್ರಮುಖ ಫುಟ್‌ಬಾಲ್‌ ಟ್ರೋಫಿಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ‘ಇತಿಹಾಸ ನಿರ್ಮಾಣಕ್ಕೆ ಇನ್ನೊಂದೇ ಪಂದ್ಯ ಉಳಿದಿದೆ’ ಎಂದು ನಾಯಕ ಕೇನ್‌ ಪ್ರತಿಕ್ರಿಯಿಸಿದ್ದಾರೆ.

1966ರಲ್ಲಿ ವಿಶ್ವಕಪ್ ಗೆದ್ದ ನಂತರ ಇಂಗ್ಲೆಂಡ್ ಯಾವುದೇ ಪ್ರಮುಖ ಪ್ರಶಸ್ತಿ ಗೆದ್ದಿಲ್ಲ. ಇಂಗ್ಲೆಂಡ್‌ ಒಮ್ಮೆಯೂ ಯುರೊ ಕಪ್ ಗೆದ್ದಿಲ್ಲ. ಕಳೆದ ಬಾರಿ (2021) ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಇಟಲಿಗೆ ಮಣಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.