ADVERTISEMENT

ಬಿಎಫ್‌ಸಿಯ ಶ್ರೀಧರ್ತ್‌ಗೆ ಸ್ಲೊವೇನಿಯಾದಲ್ಲಿ ತರಬೇತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 13:39 IST
Last Updated 26 ಅಕ್ಟೋಬರ್ 2019, 13:39 IST
ಶ್ರೀಧರ್ತ್‌
ಶ್ರೀಧರ್ತ್‌   

ಬೆಂಗಳೂರು: ಯುವ ಫುಟ್‌ಬಾಲ್ ಆಟಗಾರ, ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಅಕಾಡೆಮಿಯ ಸ್ಟ್ರೈಕರ್ ಶ್ರೀಧರ್ತ್ ನೊಂಗ್‌ಮೆಕಪಮ್ ವಿಶೇಷ ತರಬೇತಿಗಾಗಿ ಸ್ಲೊವೇನಿಯಾಗೆ ತೆರಳಿದ್ದಾರೆ. ಅಲ್ಲಿನ ಎನ್‌ಡಿ ಇಳಿರಿಜಾ 1911 ತಂಡದ ಆಟಗಾರರೊಂದಿಗೆ ಅಭ್ಯಾಸ ಮಾಡಲಿರುವ ಅವರು ಆಯ್ಕೆ ಟ್ರಯಲ್ಸ್‌ನಲ್ಲೂ ಪಾಲ್ಗೊಳ್ಳುವರು.

ಇಳಿರಿಜಾ, ಸ್ಲೊವೇನಿಯಾದ ಅತ್ಯಂತ ಹಳೆಯ ಫುಟ್‌ಬಾಲ್ ಕ್ಲಬ್ ಆಗಿದ್ದು ಪ್ರಬಲ ತಂಡವಾದ ಎನ್‌.ಕೆ ಒಲಿಂಪಿಜಾ ಲುಬಿಜಾನದಂಥ ತಂಡಗಳಿಗೆ ಆಟಗಾರರನ್ನು ಪೂರೈಸುತ್ತಿದೆ. ಮಣಿಪುರದ ಶ್ರೀಧರ್ತ್ ಮೂರು ವಾರಗಳಿಂದ ಬೆಂಗಳೂರಿನಲ್ಲಿ ಕಠಿಣ ತರಬೇತಿಯಲ್ಲಿದ್ದರು. ಸ್ಲೊವೇನಿಯಾದ ಅವರು ಇಳಿರಿಜಾ 15 ವರ್ಷದೊಳಗಿನವರ ತಂಡದೊಂದಿಗೆ 10 ದಿನ ಇರುವರು. ಈ ತಂಡ ದೇಶದ ಅಗ್ರ ಡಿವಿಷನ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ.

ಸಣ್ಣ ವಯಸ್ಸಿನಲ್ಲೇ ಫುಟ್‌ಬಾಲ್ ಆಡಲು ಆರಂಭಿಸಿದ ಶ್ರೀಧರ್ತ್ ಶಾಲಾ ಹಂತದಲ್ಲಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. ಸುಬ್ರೊತೊ ಕಪ್ ಟೂರ್ನಿಯಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದರಿಂದ ಅವರಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಅಕಾಡೆಮಿಯಿಂದ ಕರೆ ಬಂದಿತು.

ADVERTISEMENT

ಎರಡು ವರ್ಷಗಳಿಂದ ಭಾರತ ಯುವ ತಂಡದ ಪ್ರಮುಖ ಆಟಗಾರರಾಗಿರುವ ಅವರು 2020ರಲ್ಲಿ ನಡೆಯಲಿರುವ 16 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ನ ಅಂತಿಮ ಹಂತಕ್ಕೆ ತಂಡ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 15 ವರ್ಷದೊಳಗಿನವರ ಸಾಫ್‌ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿ ಮಿಂಚಿದ್ದರು. ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.