ADVERTISEMENT

ಭಾರತದ ಫುಟ್‌ಬಾಲ್‌ನ ಹಿರಿಮೆ ಹೆಚ್ಚಿಸಿದ ಚೆಟ್ರಿ

ಪಿಟಿಐ
Published 14 ಜೂನ್ 2020, 12:04 IST
Last Updated 14 ಜೂನ್ 2020, 12:04 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   

ನವದೆಹಲಿ: ‘ಭಾರತದ ಫುಟ್‌ಬಾಲ್‌ನ ವೈಭವವನ್ನು ಹೆಚ್ಚಿಸಿದ ಆಟಗಾರರ ಪೈಕಿ ಸುನಿಲ್‌ ಚೆಟ್ರಿ ಪ್ರಮುಖರು. ಬದ್ಧತೆ ಹಾಗೂ ಕಠಿಣ ಪರಿಶ್ರಮದಿಂದಲೇ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಚೆಟ್ರಿ, ಯುವ ಆಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಇಗರ್‌ ಸ್ಟಿಮ್ಯಾಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

35 ವರ್ಷ ವಯಸ್ಸಿನ ಚೆಟ್ರಿ, ಭಾರತ ತಂಡದ ಪರ ಆಡಲು ಶುರುಮಾಡಿ 15 ವರ್ಷಗಳು (ಹೋದ ಶುಕ್ರವಾರಕ್ಕೆ) ಪೂರ್ಣಗೊಂಡಿವೆ. ಬೈಚುಂಗ್‌ ಭುಟಿಯಾ ಅವರ ನಂತರ ಇಷ್ಟು ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಆಟಗಾರ ಎಂಬ ಹಿರಿಮೆಗೂ ಚೆಟ್ರಿ ಭಾಜನರಾಗಿದ್ದಾರೆ.

2005ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಅವರು ಕ್ವೆಟ್ಟಾದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಗೋಲು ಗಳಿಸಿ ಗಮನ ಸೆಳೆದಿದ್ದರು.

ADVERTISEMENT

‘ಅಭ್ಯಾಸದ ವೇಳೆ ಚೆಟ್ರಿ, ಯಾವುದಕ್ಕೂ ರಾಜಿಯಾಗುವುದೇ ಇಲ್ಲ. ಎಂತಹುದೇ ಕಠಿಣ ವ್ಯಾಯಾಮವನ್ನಾದರೂ ಅವರು ಮಾಡಿಬಿಡುತ್ತಾರೆ. ಆ ಮೂಲಕ ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡುವ ಗುಣವನ್ನೂ ಮೈಗೂಡಿಸಿಕೊಂಡಿದ್ದಾರೆ’ ಎಂದು ಸ್ಟಿಮ್ಯಾಕ್‌‍ ತಿಳಿಸಿದ್ದಾರೆ.

‘15 ವರ್ಷಗಳ ಕಾಲ ಭಾರತದ ಪರ ಆಡಿದರೂ ಚೆಟ್ರಿ ಅವರ ಸಾಧನೆಯ ಹಸಿವು ಕಿಂಚಿತ್ತೂ ಕಡಿಮೆಯಾಗಿಲ್ಲ. 35ರ ಹರೆಯದಲ್ಲೂ ಅವರು ಮೈದಾನದಲ್ಲಿ ಲವಲವಿಕೆಯಿಂದ ಓಡಾಡುತ್ತಾರೆ. ಆಟದ ಬಗ್ಗೆ ಚೆಟ್ರಿ ಅವರಷ್ಟು ಬದ್ಧತೆಯನ್ನು ಹೊಂದಿರುವ ಮತ್ತೊಬ್ಬ ಕ್ರೀಡಾಪಟುವನ್ನು ನಾನು ನೋಡಿಯೇ ಇಲ್ಲ’ ಎಂದು ಭಾರತದ ಹಿರಿಯ ಆಟಗಾರ ಸುಖ್ವಿಂದರ್‌ ಸಿಂಗ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.