ADVERTISEMENT

ಮೋಹನ್‌ ಬಾಗನ್‌ಗೆ ಕೇರಳ ಬ್ಲಾಸ್ಟರ್ಸ್‌ ಸವಾಲು: ಐಎಸ್‌ಎಲ್‌ ಟೂರ್ನಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 16:01 IST
Last Updated 13 ಫೆಬ್ರುವರಿ 2026, 16:01 IST
ತಾಲೀಮು ನಡೆಸಿದ ಕೇರಳ ಬ್ಲಾಸ್ಟರ್ಸ್‌ ತಂಡದ ಆಟಗಾರರು
ತಾಲೀಮು ನಡೆಸಿದ ಕೇರಳ ಬ್ಲಾಸ್ಟರ್ಸ್‌ ತಂಡದ ಆಟಗಾರರು   

ಕೋಲ್ಕತ್ತ: ದೇಶದ ಉನ್ನತ ದರ್ಜೆಯ ಫುಟ್‌ಬಾಲ್‌ ಲೀಗ್ ಆಗಿರುವ ಇಂಡಿಯನ್‌ ಸೂಪರ್ ಲೀಗ್‌ 2025–26ರ ಋತು ಶನಿವಾರ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 

ಈಗಾಗಲೇ ವಿಳಂಬವಾಗಿರುವ ಐಎಸ್‌ಎಲ್‌ ಟೂರ್ನಿಯಲ್ಲಿ 14 ತಂಡಗಳು ಸ್ಪರ್ಧೆಯಲ್ಲಿವೆ. ‘ಸಿಂಗಲ್ ಲೆಗ್ ರೌಂಡ್ ರಾಬಿನ್’ ಸ್ವರೂಪದಲ್ಲಿ ಒಟ್ಟು 91 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯವು ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ದಿನದ ಎರಡನೇ ಪಂದ್ಯದಲ್ಲಿ ಎಐಎಫ್‌ಎಫ್ ಸೂಪರ್ ಕಪ್ ಚಾಂಪಿಯನ್ ಎಫ್‌ಸಿ ಗೋವಾ ತಂಡವು ಐಎಸ್‌ಎಲ್‌ನ ಚೊಚ್ಚಲ ತಂಡ ಇಂಟರ್ ಕಾಶಿ ವಿರುದ್ಧ ಫಟೋರ್ಡಾದ ಪಿಜೆಎನ್ ಕ್ರೀಡಾಂಗಣದಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.

ADVERTISEMENT

ಕಳೆದ ವರ್ಷ ಪ್ರಶಸ್ತಿ ಗೆದ್ದ ಮೋಹನ್ ಬಗಾನ್ ತಂಡವು ಈ ಬಾರಿಯೂ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಸೆರ್ಗಿಯೊ ಲೊಬೆರಾ ಮಾರ್ಗದರ್ಶನದ ತಂಡವು ತವರಿನ ಕ್ರೀಡಾಂಗಣದ ಲಾಭ ಪಡೆಯುವ ಹುಮ್ಮಸ್ಸಿನಲ್ಲಿದೆ. ಕೇರಳ ತಂಡವು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 

‌‘ಬಹಳ ಸಮಯದಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದರಿಂದ ಋತುವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ನಮ್ಮ ತಂಡವು ತವರಿನಲ್ಲಿ ಅಭಿಮಾನಿಗಳ ಮುಂದೆ ಅತ್ಯುತ್ತಮ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ’ ಎಂದು ಸೆರ್ಗಿಯೊ ಪ್ರತಿಕ್ರಿಯಿಸಿದ್ದಾರೆ. 

‘ಉದ್ಘಾಟನಾ ಪಂದ್ಯದಲ್ಲಿ ದೇಶದಲ್ಲೇ ಅತ್ಯುತ್ತಮ ತಂಡವನ್ನು ಎದುರಿಸಲಿದ್ದೇವೆ. ಎದುರಾಳಿ ತಂಡವು ಪ್ರಬಲ ಆಟಗಾರರ ಪಡೆಯನ್ನು ಹೊಂದಿದೆ. ಆದರೂ ಆಟದಲ್ಲಿ ಏನೂ ಬೇಕಾದರೂ ನಡೆಯಬಹುದು. ನಮ್ಮ ತಂಡವು ಮೂರು ಅಂಕಗಳನ್ನು ಪಡೆಯಲು ಪ್ರಯತ್ನಿಸಲಿದೆ’ ಎಂದು ಕೇರಳ ಬ್ಲಾಸ್ಟರ್ಸ್ ಮುಖ್ಯ ಕೋಚ್ ಡೇವಿಡ್ ಕ್ಯಾಟಲಾ ಹೇಳಿದ್ದಾರೆ.

ಇಂದಿನ ಪಂದ್ಯಗಳು

ಮೋಹನ್‌ ಬಾಗನ್‌ –ಕೇರಳ ಬ್ಲಾಸ್ಟರ್‌ (ಸಂಜೆ 5)

ಎಫ್‌ಸಿ ಗೋವಾ– ಇಂಟರ್‌ ಕಾಶಿ (ರಾತ್ರಿ 7.30)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ಟೆನ್‌ 2, ಫ್ಯಾನ್‌ಕೋಡ್‌

ISL

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.