ಫುಟ್‌ಬಾಲ್ ಆಡುತ್ತಿರುವ ಉಸೇನ್ ಬೋಲ್ಟ್
ಮುಂಬೈ: ಜಮೈಕಾದ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಅವರು ಬೆಂಗಳೂರು ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳ ನಡುವಣ ಫುಟ್‌ಬಾಲ್ ಪ್ರದರ್ಶನ ಪಂದ್ಯದಲ್ಲಿ ಆಡಲಿದ್ದಾರೆ.
ಒಲಿಂಪಿಕ್ಸ್ ಕೂಟಗಳಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದಿರುವ ತಾರಾ ಓಟಗಾರ, ‘ಪ್ಯೂಮಾ’ ಆಯೋಜಿಸುತ್ತಿರುವ ಪ್ರದರ್ಶನ ಪಂದ್ಯದಲ್ಲಿ ಉಭಯ ತಂಡಗಳ ಪರ ತಲಾ ಅರ್ಧ ಅವಧಿಗೆ ಆಡಲಿದ್ದಾರೆ. ಅಕ್ಟೋಬರ್ 1ರಂದು ಮುಂಬೈನಲ್ಲಿ ಪಂದ್ಯ ನಡೆಯಲಿದೆ. ಫುಟ್‌ಬಾಲ್ ತಾರೆಯರು ಹಾಗೂ ಬಾಲಿವುಡ್ ಖ್ಯಾತನಾಮರು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಫುಟ್‌ಬಾಲ್ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಬೋಲ್ಟ್ ಅವರು ಅಥ್ಲೆಟಿಕ್ಸ್‌ನಿಂದ ನಿವೃತ್ತರಾದ ಬಳಿಕ ನಿಯಮಿತವಾಗಿ ಪ್ರದರ್ಶನ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಅವರು ಪ್ಯೂಮಾ ಸಂಸ್ಥೆಯ ಜಾಗತಿಕ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಉಸೇನ್ ಬೋಲ್ಟ್
‘ದೇಶದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಫುಟ್‌ಬಾಲ್ ಕೂಡ ಒಂದು. ಸಾರ್ವಕಾಲಿಕ ಶ್ರೇಷ್ಠ ಓಟಗಾರರಲ್ಲಿ ಒಬ್ಬರಾದ ಬೋಲ್ಟ್ ಅವರನ್ನು ಇಲ್ಲಿಗೆ ಕರೆತಂದು ಪಂದ್ಯ ಆಡಿಸುವ ಮೂಲಕ ಫುಟ್‌ಬಾಲ್ ಸಂಭ್ರಮದಲ್ಲಿ ನಾವೂ ಭಾಗಿಯಾಗಲಿದ್ದೇವೆ’ ಎಂದು ‘ಪ್ಯೂಮಾ ಇಂಡಿಯಾ’ದ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ತಿಕ್ ಬಾಲಗೋಪಾಲನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.