ADVERTISEMENT

AIFF ಅಮಾನತು ತೆರವು: ಫುಟ್‌ಬಾಲ್‌ ಅಭಿಮಾನಿಗಳ ಗೆಲುವು

ಕೇಂದ್ರ ಕ್ರೀಡಾ ಸಚಿವ ಠಾಕೂರ್‌ ಸಂತಸ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 12:53 IST
Last Updated 27 ಆಗಸ್ಟ್ 2022, 12:53 IST
ಫುಟ್‌ಬಾಲ್‌
ಫುಟ್‌ಬಾಲ್‌    

ಜೂರಿಚ್‌/ ನವದೆಹಲಿ (ಪಿಟಿಐ): ‘ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮೇಲಿನ ಅಮಾನತು ತೆರವು, ದೇಶದ ಎಲ್ಲ ಫುಟ್‌ಬಾಲ್‌ ಪ್ರೇಮಿಗಳಿಗೆ ದೊರೆತ ಗೆಲುವು’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

ಎಐಎಫ್‌ಎಫ್‌ ಮೇಲೆ ಹೇರಿದ್ದ ಅಮಾನತನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ (ಫಿಫಾ) ಶುಕ್ರವಾರ ಹಿಂಪಡೆದಿತ್ತು. ಮಾತ್ರವಲ್ಲ, 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಟೂರ್ನಿಯನ್ನು ನಿಗದಿಯಂತೆ ಅಕ್ಟೋಬರ್‌ 11ರಿಂದ 30ರವರೆಗೆ ಭಾರತದಲ್ಲೇ ನಡೆಸಲು ನಿರ್ಧರಿಸಿತ್ತು.

ಅಮಾನತು ತೆರವುಗೊಳಿಸುವ ನಿಟ್ಟಿನಲ್ಲಿ ಠಾಕೂರ್‌ ನೇತೃತ್ವದ ಕ್ರೀಡಾ ಸಚಿವಾಲಯವು ಸಕ್ರಿಯವಾಗಿ ಕೆಲಸ ಮಾಡಿತ್ತು. ಎಐಎಫ್‌ಎಫ್‌ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕ್ರೀಡಾ ಸಚಿವಾಲಯವು ಸುಪ್ರೀಂ ಕೋರ್ಟ್‌ಅನ್ನು ಕೋರಿತ್ತು. ಸುಪ್ರೀಂ ಕೋರ್ಟ್‌ ತನ್ನ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿದ್ದು, ಅಮಾನತು ತೆರವಿನ ಹಾದಿಯನ್ನು ಸುಗಮಗೊಳಿಸಿತ್ತು.

ADVERTISEMENT

‘ಎಐಎಫ್‌ಎಫ್ ಮೇಲಿನ ನಿಷೇಧವನ್ನು ಫಿಫಾ ತೆರವುಗೊಳಿಸಿರುವುದು ಸಂತಸದ ವಿಷಯ. ಮಹಿಳಾ ವಿಶ್ವಕಪ್‌ ಟೂರ್ನಿ ನಿಗದಿಯಂತೆ ಭಾರತದಲ್ಲೇ ನಡೆಯಲಿದೆ. ಭಾರತದ ಫುಟ್‌ಬಾಲ್‌ ಅಭಿಮಾನಿಗಳಿಗೆ ದೊರೆತ ಗೆಲುವು ಇದು‘ ಎಂದು ಠಾಕೂರ್‌ ‘ಟ್ವೀಟ್‌’ ಮಾಡಿದ್ದಾರೆ.

ವ್ಯವಸ್ಥೆಯನ್ನು ಬದಲಾಯಿಸಬೇಕು: ‘ಭವಿಷ್ಯದಲ್ಲಿ ಇದೇ ರೀತಿಯ ಅಮಾನತು ಶಿಕ್ಷೆ ಎದುರಾಗುವುದನ್ನು ತಪ್ಪಿಸಬೇಕಾದರೆ, ದೇಶದ ಫುಟ್‌ಬಾಲ್‌ನ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ’ ಎಂದು ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.

‘ಅಮಾನತು ತೆರವಾಗಿರುವುದು ಸಂತಸದ ಸುದ್ದಿ. ಫಿಫಾ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಇದು ಭಾರತದ ಫುಟ್‌ಬಾಲ್‌ಗೆ ದೊರೆತ ಗೆಲುವು’ ಎಂದು ಹೇಳಿದ್ದಾರೆ.

ಎಐಎಫ್‌ಎಫ್‌ ಚುನಾವಣೆ ಸೆ.2 ರಂದು ನಡೆಯಲಿದ್ದು, ಭುಟಿಯಾ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.