ADVERTISEMENT

ಐಎಸ್ಎಲ್‌ ಫುಟ್‌ಬಾಲ್: ಮುಂಬೈ ಎಫ್‌ಸಿ ‘ವಿಘ್ನ‘ ನಿವಾರಕ ಬೆಂಗಳೂರು ಪ್ರತಿಭೆ

ವಿಕ್ರಂ ಕಾಂತಿಕೆರೆ
Published 6 ಮಾರ್ಚ್ 2021, 19:30 IST
Last Updated 6 ಮಾರ್ಚ್ 2021, 19:30 IST
ವಿಘ್ನೇಶ್ ದಕ್ಷಿಣಾಮೂರ್ತಿ –ಐಎಸ್‌ಎಲ್ ಮೀಡಿಯಾ ಚಿತ್ರ
ವಿಘ್ನೇಶ್ ದಕ್ಷಿಣಾಮೂರ್ತಿ –ಐಎಸ್‌ಎಲ್ ಮೀಡಿಯಾ ಚಿತ್ರ   

ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿರುವ ಮುಂಬೈ ಸಿಟಿ ಎಫ್‌ಸಿ ಈಗಾಗಲೇ ಲೀಗ್ ಹಂತದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು, ಆ ತಂಡಕ್ಕೆ 2022ರ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಗುಂಪು ಹಂತದಲ್ಲಿ ಆಡುವ ಅವಕಾಶವನ್ನೂ ಒದಗಿಸಿಕೊಟ್ಟಿದೆ. ಹೀಗೆ, ‘ಡಬಲ್’ ಸಂಭ್ರಮದಲ್ಲಿರುವ ತಂಡಕ್ಕೆ ಐಎಸ್‌ಎಲ್‌ನ ಈ ಆವೃತ್ತಿಯ ಮೊದಲಿನಿಂದ ಇಲ್ಲಿಯ ವರೆಗೆ ಹೆಗಲೆಣೆಯಾದ ಆಟಗಾರರಲ್ಲಿ ಬೆಂಗಳೂರಿನ ಪ್ರತಿಭೆ ವಿಘ್ನೇಶ್‌ ದಕ್ಷಿಣಾಮೂರ್ತಿ ಅವರೂ ಇದ್ದಾರೆ. ತಂಡದ ರಕ್ಷಣಾ ವಿಭಾಗದ ಬೆನ್ನೆಲುಬು ಆಗಿರುವ ಅವರು ವಿಘ್ನ ನಿವಾರಕನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

23ನೇ ಸಂಖ್ಯೆಯ ಜರ್ಸಿ ತೊಟ್ಟು ಕಣಕ್ಕೆ ಇಳಿಯುವ 23 ವರ್ಷದ ಈ ಮಿಡ್‌ಫೀಲ್ಡರ್‌ ಹಾಗೂ ಡಿಫೆಂಡರ್‌ ಬೆಂಗಳೂರಿನ ಓಜೋನ್ ಅಕಾಡೆಮಿಯಲ್ಲಿ ಬೆಳೆದವರು. ಬೆಂಗಳೂರು ನಗರ ನಿವಾಸಿಯಾಗಿರುವ ಅವರು ಭಾರತ ತಂಡಕ್ಕಾಗಿಯೂ ಆಡಿದ್ದಾರೆ. 2018ರ ಸಾಫ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ತಂಡದ ಪರವಾಗಿ ಪದಾರ್ಪಣೆ ಮಾಡಿ ಆ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೆಣಸಿದ್ದರು. ಐಎಸ್‌ಎಲ್‌ನಲ್ಲಿ 2018ರಿಂದ ಆಡುತ್ತಿದ್ದರೂ ಈ ಬಾರಿ ಅವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂದಿದೆ.

ಡಿಸೆಂಬರ್‌ನಲ್ಲಿ ನಡೆದ ಹೈದರಾಬಾದ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ವಿಘ್ನೇಶ್ ಗಳಿಸಿದ ಮೋಹಕ ಗೋಲು ಐಎಸ್‌ಎಲ್‌ನ ಅದ್ಭುತ ಗೋಲುಗಳಲ್ಲಿ ಒಂದು ಎಂದೇ ಹೆಸರು ಗಳಿಸಿದೆ. ಬಿಪಿನ್ ಸಿಂಗ್ ಎಡಭಾಗದಿಂದ ಗಾಳಿಯಲ್ಲಿ ತೇಲಿಬಿಟ್ಟ ಚೆಂಡನ್ನು ಮೇಲೆ ಜಿಗಿದು ಎಡಗಾಲಿನಲ್ಲಿ ಒದ್ದು ಕ್ರಾಸ್‌ ಬಾರ್‌ಗೆ ಸೋಕಿ ಗೋಲುಪೆಟ್ಟಿಗೆಯ ಒಳಗೆ ಬೀಳುವಂತೆ ಮಾಡಿದ ವಿಘ್ನೇಶ್ ಅವರ ಚಾಣಾಕ್ಷ ಮತ್ತು ಮಿಂಚಿನ ಆಟಕ್ಕೆ ನೆಟ್ಟಿಗರು ಮೆಚ್ಚುಗೆಯ ಮಳೆ ಗರೆದಿದ್ದರು.

ADVERTISEMENT

ಹಿಂದಿನ ಎರಡು ಆವೃತ್ತಿಗಳಲ್ಲಿ ವಿಘ್ನೇಶ್‌ಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. 2018ರಲ್ಲಿ ನಾಲ್ಕು ಪಂದ್ಯಗಳಲ್ಲಿ ಅವರು ಆಡಿದ್ದುಒಟ್ಟು 133 ನಿಮಿಷ ಮಾತ್ರ. ಒಂದು ಶಾಟ್‌, ಮೂರು ಕ್ರಾಸ್ ಮತ್ತು 37 ಪಾಸ್‌ಗಳು ಮಾತ್ರ ಅವರಿಂದ ಮೂಡಿಬಂದಿದ್ದವು. ನಂತರದ ವರ್ಷ ಏಕೈಕ ಪಂದ್ಯದಲ್ಲಿ ಏಳು ನಿಮಿಷ ಆಡುವ ಅವಕಾಶ ದಕ್ಕಿತ್ತು. ಹೀಗಾಗಿ ಒಂದು ಕ್ರಾಸ್ ಮತ್ತು ಐದು ಪಾಸ್‌ಗಳನ್ನು ನೀಡಲು ಮಾತ್ರ ಸಾಧ್ಯವಾಗಿತ್ತು. ಈ ವರ್ಷ ಲೀಗ್‌ ಹಂತದಲ್ಲಿ ತಂಡ ಆಡಿರುವ 20 ಪಂದ್ಯಗಳ ಪೈಕಿ 19ರಲ್ಲಿ ಅವರು ಕಣಕ್ಕೆ ಇಳಿದಿದ್ದಾರೆ. 30 ಕ್ರಾಸ್ ಮತ್ತು 398 ಪಾಸ್‌ಗಳನ್ನು ನೀಡಿದ್ದು ಆಟದ ಎಲ್ಲ ವಿಭಾಗಗಳಲ್ಲೂ ಛಾಪು ಮೂಡಿಸಿದ್ದಾರೆ.

ಮುಂಬೈ ಸಿಟಿ ಎಫ್‌ಸಿ ಸೇರುವ ಮುನ್ನ ನಾನು ಎಡಭಾಗದ ಮಿಡ್‌ಫೀಲ್ಡರ್ ಆಗಿದ್ದೆ. ಮುಂಬೈ ಸಿಟಿ ಎಫ್‌ಸಿಯ ಕೋಚ್ ಆಗಿದ್ದ ಜಾರ್ಜ್ ಕೋಸ್ಟಾ ಲೆಫ್ಟ್‌ ಬ್ಯಾಕ್‌ ವಲಯದಲ್ಲಿ ಆಡಲು ಸೂಚಿಸಿದರು. ಇದರಿಂದ ಮಿಡ್‌ಫೀಲ್ಡರ್‌ ಆಗಿಯೂ ಡಿಫೆಂಡರ್ ಆಗಿಯೂ ಆಡಲು ಕಲಿತೆ. ಈಗಿನ ಕೋಚ್ ಸರ್ಜಿಯೊ ಲೊಬೆರಾ ಡಿಫೆಂಡರ್‌ ಆಗಿಯೇ ಇರಲು ಸೂಚಿಸಿದ್ದಾರೆ. ಈ ಎರಡು ವಿಭಾಗಗಳಲ್ಲಿ ಮಹತ್ವದ ವ್ಯತ್ಯಾಸಗಳೇನೂ ಇಲ್ಲ. ಆದರೆ ಲೆಫ್ಟ್ ಬ್ಯಾಕ್‌ನಲ್ಲಿದ್ದಾಗ ರಕ್ಷಣಾ ವಿಭಾಗದ ಕಡೆಗೆ ಹೆಚ್ಚು ಗಮನ ಕೊಡಲೇಬೇಕು. ಅದಕ್ಕೆ ತಕ್ಕಂತೆ ಹೊಂದಿಕೊಂಡು ಈಗ ಆಡುತ್ತಿದ್ದೇನೆ’ ಎಂದು ವಿಘ್ನೇಶ್ ಹೇಳಿದರು.

‘ಟೂರ್ನಿಯ ಉದ್ದಕ್ಕೂ ಉತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದೇವೆ. ಲೀಗ್‌ ಶೀಲ್ಡ್ ಗೆಲ್ಲುವುದರೊಂದಿಗೆ ನಾವು ನಮ್ಮ ಮೊದಲ ಗುರಿಯನ್ನು ತಲುಪಿದ್ದೇವೆ. ಹೀಗಾಗಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದೇವೆ. ಈ ಹಾದಿಯಲ್ಲಿ ನನ್ನಿಂದಾದ ಕಾಣಿಕೆಯನ್ನು ನೀಡಲು ಸಿದ್ಧನಿದ್ದೇನೆ’ ಎಂದು ವಿಘ್ನೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.