ADVERTISEMENT

ಗಲಭೆಯ ಬೆಂಕಿಗೆ ನನ್ನ ಕನಸು ಭಸ್ಮ: ಮಣಿಪುರದ ಫುಟ್‌ಬಾಲ್ ಆಟಗಾರನ ಅಳಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 16:06 IST
Last Updated 30 ಜುಲೈ 2023, 16:06 IST
ಚಿಂಗ್ಲೆನ್ಸನಾ ಸಿಂಗ್
ಚಿಂಗ್ಲೆನ್ಸನಾ ಸಿಂಗ್   

ನವದೆಹಲಿ : ಕೋಯಿಕ್ಕೋಡ್‌ನಲ್ಲಿ ಆ ಸಂಜೆ ಯಥಾಪ್ರಕಾರ ಚಿಂಗ್ಲೆನ್ಸನಾ  ಸಿಂಗ್ ಮೈದಾನದಲ್ಲಿ ಆಟ ಮುಗಿಸಿ ತಮ್ಮ ಡ್ರೆಸ್ಸಿಂಗ್ ಕೋಣೆಗೆ ಬಂದರು. ಬ್ಯಾಗ್‌ನಲ್ಲಿದ್ದ ಫೋನ್ ಕೈಗೆತ್ತಿಕೊಂಡವರಿಗೆ ಆಘಾತ. 

ತಮ್ಮ ತವರು ರಾಜ್ಯ ಮಣಿಪುರದಲ್ಲಿದ್ದ ಸಂಬಂಧಿಕರು, ಆಪ್ತರು ಕಳಿಸಿದ್ದ ಸಂದೇಶಗಳು ಅವರ ಮನಸ್ಸನ್ನು ಘಾಸಿಗೊಳಿಸಿದ್ದವು. 

‘ನಮ್ಮಿಂದ ಎಲ್ಲವನ್ನೂ ಈ ಗಲಭೆಯು ಕಸಿದುಕೊಂಡಿದೆ. ಜೀವನದಲ್ಲಿ ಗಳಿಸಿದ್ದೆಲ್ಲವೂ ನಾಶವಾಗಿದೆ. ಮಣಿಪುರದ ಚುರಚಂದಾಪುರದಲ್ಲಿ ನಾನು ಕಟ್ಟಿಸಿದ್ದ ಮನೆಗೆ ಬೆಂಕಿ ಇಡಲಾಗಿದೆ. ನಾನೇ ನಿರ್ಮಿಸಿಕೊಟ್ಟಿದ್ದ ಫುಟ್‌ಬಾಲ್ ಹುಲ್ಲಿನಂಕಣವನ್ನೂ ಸುಟ್ಟುಹಾಕಲಾಗಿದೆ ಎಂಬ ಸುದ್ದಿಗಳು ಬಂದಿವೆ. ಇದರಿಂದಾಗಿ ನನಗೆ ಅಪಾರ ನೋವಾಗಿದೆ. ನನ್ನೂರಿನ ಮತ್ತು  ಸುತ್ತಮುತ್ತಲಿನ ಯುವ ಪ್ರತಿಭೆಗಳಿಗೆ ಆಡಲು ಸೌಲಭ್ಯ ರೂಪಿಸುವ ಕನಸಾಗಿತ್ತು ಅದು. ಆದರೆ ಈಗ ಕನಸು ನುಚ್ಚುನೂರಾಗಿದೆ. ಅದೃಷ್ಟವಶಾತ್ ನನ್ನ ಕುಟುಂಬವು ಅಪಾಯದಿಂದ ಪಾರಾಗಿದೆ. ಅವರೆಲ್ಲರನ್ನೂ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗಿದೆ‘ ಎಂದು ಭಾರತ ಫುಟ್‌ಬಾಲ್ ತಂಡದ ಪ್ರಮುಖ ಆಟಗಾರರಾಗಿರುವ ಸಿಂಗ್ ಹೇಳಿದರು.

ADVERTISEMENT

‘ಫುಟ್‌ಬಾಲ್  ಅಕಾಡೆಮಿಗಳಿಗೆ ಸೇರಿ ಕಲಿಯಲಾಗದ ಬಡಕುಟುಂಬಗಳ ಮಕ್ಕಳಿಗೆ ಉಚಿತ ಸೌಲಭ್ಯ ಒದಗಿಸುವುದು ನನ್ನ ಬಹುಕಾಲದ ಕನಸು. ಅವರೆಲ್ಲರೂ ರಾಷ್ಟ್ರ ತಂಡಕ್ಕೆ ಆಡುವಂತಾಗಬೇಕು ಎಂಬುದು ನನ್ನ ಗುರಿಯಾಗಿತ್ತು. ಇದೀಗ ಎಲ್ಲವೂ ಕಮರಿ ಹೋಗಿದೆ‘ ಎಂದು ಸಿಂಗ್ ಕಣ್ಣೀರಿಟ್ಟರು.

ಹತ್ತಾರು ಪ್ರಯತ್ನಗಳ ನಂತರ ಅವರು ತಮ್ಮ ತಾಯಿಯೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗ್ ಮೂಲತಃ ಮಣಿಪುರದ ಚುರಚಂದಾಪುರ ಜಿಲ್ಲೆಯ ಕುಮುಜಾಮಾ ಲೀಕೈ ಗ್ರಾಮದವರು.

ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿತ್ತು. ಅದೇ ದಿನ ಅವರು ಕೋಯಿಕ್ಕೋಡ್‌ನಲ್ಲಿ ನಡೆದ ಎಎಫ್‌ಪಸಿ ಕಪ್ ಪ್ಲೇಆಫ್‌ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡವನ್ನು ಪ್ರತಿನಿಧಿಸಿದ್ದರು. ಮೋಹನ್ ಬಾಗನ್ ವಿರುದ್ಧ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.