ADVERTISEMENT

ವನಿತಾ ಫುಟ್‌ಬಾಲ್‌ ಫೈನಲ್ ಇಂದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 4:20 IST
Last Updated 8 ಫೆಬ್ರುವರಿ 2024, 4:20 IST
 ಫುಟ್‌ಬಾಲ್‌
ಫುಟ್‌ಬಾಲ್‌   

ಢಾಕಾ : ಭಾರತ ತಂಡ, ಸ್ಯಾಫ್‌ 19 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಗುರುವಾರ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಪ್ರಶಸ್ತಿ ಬರ ನೀಗಿಸುವ ಗುರಿಯಲ್ಲಿದೆ.

ಮಹಿಳಾ ಫುಟ್‌ಬಾಲ್‌ನಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ, ಸ್ಯಾಫ್‌ ವಯೋವರ್ಗ ಚಾಂಪಿಯನ್‌ ಷಿಪ್‌ನಲ್ಲಿ ಭಾರತ ಅಷ್ಟೇನೂ ಉತ್ತಮ ನಿರ್ವಹಣೆ ತೋರಿಲ್ಲ. ಕಳೆದ ವರ್ಷ ಢಾಕಾದಲ್ಲೇ ನಡೆದಿದ್ದ 20 ವರ್ಷದೊಳಗಿನವರ ಮಹಿಳಾ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆತಿಥೇಯರು ಭಾರತ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದ್ದರು.

ಹೀಗಾಗಿ ಗುರುವಾರದ ಅಂತಿಮ ಪಂದ್ಯ ಭಾರತಕ್ಕೆ ತನ್ನ ಅಸ್ತಿತ್ವ ಸಾರಲು ಉತ್ತಮ ವೇದಿಕೆಯಾಗಿದೆ. ಗುಂಪು ಹಂತದ ಪಂದ್ಯಗಳಲ್ಲಿ ಭಾರತ ತಂಡವು, ಭೂತಾನ್ (10–0) ವಿರುದ್ಧ, ನೇಪಾಳ (4–0) ವಿರುದ್ಧ ಜಯಗಳಿಸಿತ್ತು. ಆದರೆ ಬಾಂಗ್ಲಾ ಎದುರು 0–1 ಗೋಲಿನಿಂದ ಸೋಲನುಭವಿಸಿತ್ತು.

ADVERTISEMENT

‌ಬಿಗಿ ರಕ್ಷಣಾ ವಿಭಾಗ, ಸಮತೋಲನ ಹೊಂದಿರುವ ಮಿಡ್‌ಫೀಲ್ಡ್‌ ಜೊತೆಗೆ ಭಾರತ ಆಕ್ರಮಣದ ಆಟವನ್ನು ಪ್ರದರ್ಶಿ ಸಿದೆ. ಫಾರ್ಡರ್ಡ್‌ಗಳಾದ ಪೂಜಾ ಮತ್ತು ಸುಲಂಜನಾ ರಾವುಲ್, ವಿಂಗರ್‌ಗಳಾದ ನೇಹಾ ಮತ್ತು ಸಿಬಾನಿ ದೇವಿ ಅವರ ಪ್ರದರ್ಶನ ಉತ್ತಮವಾಗಿದೆ. ಆದರೆ, ಉತ್ತಮ ಲಯದಲ್ಲಿರುವ ಬಾಂಗ್ಲಾಕ್ಕೆ, ಪ್ರೇಕ್ಷಕರ ಬೆಂಬಲವೂ ಇರುವುದು ಅನುಕೂಲಕರ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.