ADVERTISEMENT

ಅಥ್ಲೆಟಿಕ್ಸ್: ಒಲಿಂಪಿಕ್ಸ್ ತಪ್ಪಿಸಿಕೊಂಡ ಗುರುಪ್ರೀತ್

ಪಿಟಿಐ
Published 20 ಜುಲೈ 2021, 17:09 IST
Last Updated 20 ಜುಲೈ 2021, 17:09 IST

ನವದೆಹಲಿ: ಭಾರತದ ನಡಿಗೆ ಸ್ಪರ್ಧಿ ಗುರುಪ್ರೀತ್ ಸಿಂಗ್ ಅವರು ಟೋಕಿಯೊ ಒಲಿಂಪಿಕ್ಸ್ ತಪ್ಪಿಸಿಕೊಂಡಿದ್ದಾರೆ.

ವಿಶ್ವ ರ‍್ಯಾಂಕಿಂಗ್ ಆಧಾರದಲ್ಲಿ ಗುರುಪ್ರೀತ್ ಅರ್ಹತೆ ಗಳಿಸಿದ್ದರು. ಆದರೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ), ಕಳುಹಿಸಿಕೊಟ್ಟಿರುವ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಹೀಗಾಗಿ ಅವರು ಈಗ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಮಾನ್ಯತೆ ಕಳೆದುಕೊಂಡಿದ್ದಾರೆ.

50 ಕಿ.ಮೀ. ವಿಭಾಗದಲ್ಲಿ ಸ್ಪರ್ಧಿಸುವ ಗುರುಪ್ರೀತ್ ಅವರಿಗೆ ಕೊನೆಯ ಕ್ಷಣದಲ್ಲಿ ಮಾನ್ಯತೆ ದೊರಕಿಸಿಕೊಡುವಎಎಫ್‌ಐನ ಪ್ರಯತ್ನ ಫಲಿಸಲಿಲ್ಲ ಎಂದು ತಿಳಿದುಬಂದಿದೆ.

ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಹತ್ತಿರದಲ್ಲಿರುವ ಸಂಭಾವ್ಯ ಕ್ರೀಡಾಪಟುಗಳ ದೀರ್ಘ ಪಟ್ಟಿಗೆ ಮಾನ್ಯತೆ ಪಡೆಯಲು ಒಲಿಂಪಿಕ್ಸ್ ಪ್ರಾರಂಭವಾಗುವ ತಿಂಗಳುಗಳ ಮೊದಲು ಸಲ್ಲಿಸಲಾಗುತ್ತದೆ. ಕೊನೆಯಲ್ಲಿ ಯಾರು ಅರ್ಹತೆ ಗಳಿಸುವುದಿಲ್ಲವೊ ಅವರು ಮಾನ್ಯತೆ ಪಡೆದಿದ್ದರೂ ಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ ನಡೆಯುವ ಕಾರ್ಯವಿಧಾನವಾಗಿದೆ.

50 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಗುರುಪ್ರೀತ್ ಅವರ ಶ್ರೇಷ್ಠ ಸಾಧನೆ 3 ತಾಸು 59 ನಿಮಿಷ, 42 ಸೆಕೆಂಡು ಆಗಿದೆ. ಒಲಿಂಪಿಕ್ಸ್ ಅರ್ಹತೆಗೆ ಮಾನದಂಡ 3 ತಾಸು 50 ನಿಮಿಷ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.