ADVERTISEMENT

ಚೆಸ್‌, ಬ್ಯಾಡ್ಮಿಂಟನ್‌ನಲ್ಲಿ ಚಿನ್ನ; ಈಜಿನಲ್ಲಿ ಬೆಳ್ಳಿ

ಏಷ್ಯನ್ ಪ್ಯಾರಾ ಕ್ರೀಡಾಕೂಟ: ಸೈಕ್ಲಿಂಗ್‌ನಲ್ಲಿ ಗುರುಲಾಲ್ ಸಿಂಗ್‌ಗೆ ಕಂಚು

ಪಿಟಿಐ
Published 12 ಅಕ್ಟೋಬರ್ 2018, 20:29 IST
Last Updated 12 ಅಕ್ಟೋಬರ್ 2018, 20:29 IST
ದೀಪಾ ಮಲಿಕ್‌
ದೀಪಾ ಮಲಿಕ್‌   

ಜಕಾರ್ತ: ಚೆಸ್‌ನಲ್ಲಿ ಎರಡು ಮತ್ತು ಬ್ಯಾಡ್ಮಿಂಟನ್‌ನಲ್ಲಿ ಒಂದು ಚಿನ್ನದ ಪದಕ ಗೆದ್ದ ಭಾರತದ ಅಥ್ಲೀಟ್‌ಗಳು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಶುಕ್ರವಾರ ಮಿನುಗಿದರು. ಈಜಿನಲ್ಲಿ ಬೆಳ್ಳಿ, ಡಿಸ್ಕಸ್‌ ಥ್ರೋ ಮತ್ತು ಸೈಕ್ಲಿಂಗ್‌ನಲ್ಲಿ ಕಂಚಿನ ಪದಕ ಭಾರತದ ಪಾಲಾಯಿತು.

ಕರ್ನಾಟಕದ ಕಿಶನ್‌ ಗಂಗೊಳ್ಳಿ ಅವರು ಪುರುಷರ ವೈಯಕ್ತಿಕ ರ‍್ಯಾಪಿಡ್‌ ಆರು–ಬಿ2/ಬಿ3 ವಿಭಾಗದ ಚೆಸ್‌ನಲ್ಲಿ ಮಜೀದ್‌ ಬಘೇರಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು. ಮಹಿಳೆಯರ ವೈಯಕ್ತಿಕ ರ‍್ಯಾಪಿಡ್‌ ಚೆಸ್‌ನ ಪಿ1 ವಿಭಾಗದಲ್ಲಿ ಕೆ.ಜೆನಿತಾ ಆ್ಯಂಟೊ ಚಿನ್ನ ಗಳಿಸಿ
ದರು. ಅಂತಿಮ ಸುತ್ತಿನಲ್ಲಿ ಅವರು ಇಂಡೊನೇಷ್ಯಾದ ಮನುರಂಗ್ ರೊಸ್ಲಿಂಡ ಎದುರು ಗೆದ್ದರು. ಮಹಿಳೆಯರ ಬ್ಯಾಡ್ಮಿಂಟನ್‌ನಲ್ಲಿ ಪಾರುಲ್‌ ಪರ್ಮಾರ್‌ 21–9, 21–5ರಿಂದ ಥಾಯ್ಲೆಂಡ್‌ನ ವಂದೀ ಕಮ್ಟಮ್‌ ಎದುರು ಗೆದ್ದು ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಸ್ವ‍‍ಪ್ನಿಲ್‌ಗೆ ಬೆಳ್ಳಿ ಪದಕ: ಪುರುಷರ ಈಜು ಸ್ಪರ್ಧೆಯ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಎಸ್‌–10 ವಿಭಾಗದಿಂದ ಕಣಕ್ಕೆ ಇಳಿದಿದ್ದ ಸ್ವಪ್ನಿಲ್ ಪಾಟೀಲ್‌ ಬೆಳ್ಳಿ ಗಳಿಸಿದರು. 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಅವರು ಕಂಚು ಗಳಿಸಿದ್ದರು. ಸೈಕ್ಲಿಂಗ್‌ನಲ್ಲಿ ಪುರುಷರ ಸಿ4 ವಿಭಾಗದ 4000 ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಗುರುಲಾಲ್ ಸಿಂಗ್‌ ಕಂಚು ಗೆದ್ದರು.

ADVERTISEMENT

ಡಿಸ್ಕಸ್‌ನಲ್ಲಿ ದೀಪಾ ಮಲಿಕ್‌ಗೆ ಕಂಚು: ಡಿಸ್ಕಸ್‌ ಥ್ರೋದಲ್ಲಿ ಕಂಚಿನ ಪದಕ ಗೆದ್ದ ಭಾರತದ ದೀಪಾ ಮಲಿಕ್‌ ಕೂಟದಲ್ಲಿ ಎರಡನೇ ಪದಕ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಎಫ್‌–51/52/53 ವಿಭಾಗದಲ್ಲಿ 9.67 ಮೀಟರ್ಸ್ ದೂರ ಎಸೆದು ಅವರು ತೃತೀಯ ಸ್ಥಾನ ಗೆದ್ದರು. ರಿಯೊ
ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ದೀಪಾ ಇಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಪದಕ ಗೆಲ್ಲುವ ಅಂತರವನ್ನು ತಲುಪಿದರು. ಮಹಿಳೆಯರ
ಜಾವೆಲಿನ್ ಥ್ರೋದಲ್ಲೂ ಅವರು ಕಂಚು ಗೆದ್ದಿದ್ದರು.

ಇರಾನ್‌ನ ಎಲ್ನಾಜ್ ದರಾಬಿಯನ್‌ ಅವರು ಏಷ್ಯನ್‌ ದಾಖಲೆ ಮುರಿಯುವ ಮೂಲಕ (10.71 ಮೀಟರ್ಸ್‌) ಚಿನ್ನ ಗೆದ್ದರೆ, ಬಹರೇನ್‌ನ ಫಾತಿಮಾ ನೆಧಾಮ್‌ (9.87 ಮೀಟರ್ಸ್‌) ಬೆಳ್ಳಿಯ ಪದಕ ಗೆದ್ದರು. ಕಣದಲ್ಲಿದ್ದ ಭಾರತದ ಮತ್ತೊಬ್ಬ ಅಥ್ಲೀಟ್‌ ಏಕ್ತಾ ಭ್ಯಾನ್‌ (6.52 ಮೀಟರ್ಸ್‌) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.