ADVERTISEMENT

ವಿಶ್ವ ಈಜು ಚಾಂಪಿಯನ್‌ಷಿಪ್‌: ಚೀನಾದ ಬಾಲೆಯ ಮೇಲೆ ಕುತೂಹಲದ ಕಣ್ಣು

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 15:26 IST
Last Updated 17 ಜುಲೈ 2025, 15:26 IST
ಚೀನಾದ ಯು ಝಿದಿ
ಚೀನಾದ ಯು ಝಿದಿ   

ಸಿಂಗಪುರ: ಚೀನಾದ ಈ ಪುಟ್ಟ ಈಜುಗಾತಿಯ ವಯಸ್ಸು 12. ಆದರೆ ಈಗಾಗಲೇ ಈಜುಗೊಳದಲ್ಲಿ ದೊಡ್ಡ ಅಲೆಗಳನ್ನೆಬ್ಬಿಸಿರುವ ಯು ಝಿದಿ ಈ ತಿಂಗಳ ಕೊನೆಯಲ್ಲಿ  ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾಳೆ. ಎಲ್ಲರ ಕುತೂಹಲದ ಕಣ್ಣು ಈಕೆಯ ಮೇಲಿದೆ.

ಇದಕ್ಕೆ ಕಾರಣ ಪುಟ್ಟ ವಯಸ್ಸು ಮಾತ್ರವಲ್ಲ, ಮೂರು ಸ್ಪರ್ಧೆಗಳನ್ನು ಯು ಝಿದಿ ಈ ವರ್ಷ ವಿಶ್ವದ ಉತ್ತಮ ಕಾಲಾವಧಿಯಲ್ಲಿ ಈಜಿದ್ದಾಳೆ. ಈಕೆ ತೆಗೆದುಕೊಂಡ ಅವಧಿ, ಕಳೆದ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕಕ್ಕೆ ಅತಿ ಸನಿಹವಿದೆ. ಹದಿಹರೆಯಕ್ಕೆ ಕಾಲಿಡುವ ಮೊದಲೇ ಯು ಝಿದಿ ಭರವಸೆ ಮೂಡಿಸಿದ್ದಾಳೆ.

ಪ್ರತಿ ಸಲ ಕೊಳಕ್ಕೆ ಇಳಿಯುವಾಗ ಯು ತನ್ನ ವೈಯಕ್ತಿಕ ಅವಧಿಯನ್ನು ಉತ್ತಮಪಡಿಸುತ್ತ ಬಂದಿದ್ದಾಳೆ. ವೈಯಕ್ತಿಕ ಶ್ರೇಷ್ಠ ಅವಧಿ ಉತ್ತಮಪಡಿಸುತ್ತಿರುವುದು ಆಕೆಗೆ ವಿಶ್ವಾಸ ಮಾತ್ರವಲ್ಲ,  ದಾಖಲೆ, ಪದಕ ಮತ್ತು ತಾರಾಪಟ್ಟದ ಸಮೀಪ ತಲುಪಿಸುತ್ತಿವೆ.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನ 200 ಮೀ. ಮೆಡ್ಲೆ, 400 ಮೀ. ಮೆಡ್ಲೆ ಮತ್ತು 200 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಗೆ ಯು ಝಿದಿ ಅರ್ಹತೆ ಗಳಿಸಿದ್ದಾಳೆ. 

ಮೇ ತಿಂಗಳಲ್ಲಿ ನಡೆದ ಚೀನಾ ಚಾಂಪಿಯನ್‌ಷಿಪ್‌ನ 200 ಮೀ. ಮೆಡ್ಲೆಯಲ್ಲಿ ಈಕೆ ತೆಗೆದುಕೊಂಡ 10.63 ಸೆ.ಗಳ ಅವಧಿ ಈ ವಯಸ್ಸಿನ (ಬಾಲಕ ಅಥವಾ ಬಾಲಕಿ) ಈಜುಪಟುವಿನ ಶ್ರೇಷ್ಠ ಸಾಧನೆ ಎಂದು ವಿಶ್ವ ಅಕ್ವೆಟಿಕ್ಸ್‌ ಹೇಳಿದೆ.

ಇದೇ ಕೂಟದ 200 ಮೀ. ಬಟರ್‌ಫ್ಲೈ ಸ್ಪರ್ಧೆ ಪೂರೈಸಲು ತೆಗೆದುಕೊಂಡ 2:06.83 ಅವಧಿಯು ಈ ವರ್ಷ ವಿಶ್ವದ ಐದನೇ ಅತಿ ವೇಗದ್ದು ಎನಿಸಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 400 ಮೀ. ಮೆಡ್ಲೆಯನ್ನು 4ನಿ.35.53 ಸೆ.ಗಳಲ್ಲಿ ಕ್ರಮಿಸಿದ್ದಾಳೆ. ಇದೂ ವಿಶ್ವದ ಐದನೇ ಅತಿ ವೇಗದ ಅವಧಿ. ಜೊತೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಅಮೆರಿಕದ ಎಮ್ಮಾ ವೇಯಾಂಟ್‌ ಅವರಿಗಿಂತ ಬರೇ 0.6 ಸೆ.ಗಳಷ್ಟೇ ಹಿಂದೆ.

ಸಮ್ಮರ್‌ಗೆ ಪೈಪೋಟಿ?

400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಕೆನಡಾದ 18 ವರ್ಷ ವಯಸ್ಸಿನ ತಾರೆ ಸಮ್ಮರ್‌ ಮೆಕಿಂಟೋಷ್‌ ಅವರು ವಿಶ್ವದಾಖಲೆ (4:23.65) ಹೊಂದಿದ್ದಾರೆ. 200 ಮೀ. ಮೆಡ್ಲೆಯನ್ನು ಸಮ್ಮರ್‌ 2ನಿ.05.70 ಸೆ.ಗಳಲ್ಲಿ ಈಜಿದ ದಾಖಲೆ ಹೊಂದಿದ್ದಾರೆ.

ಅವರಿಗೆ ಹೋಲಿಸಿದರೆ, 12ನೇ ವಯಸ್ಸಿನಲ್ಲಿ ಯು, ಸಮ್ಮರ್ ಅವರಿಗಿಂತ 400 ಮೀ. ವೈಯಕ್ತಿಕ ಮೆಡ್ಲೆಯನ್ನು 15 ಸೆ. ವೇಗವಾಗಿ ಈಜಿದ್ದಾರೆ. 200 ಮೀ. ಮೆಡ್ಲೆಯನ್ನು 12 ಸೆ. ವೇಗವಾಗಿ ಮುಗಿಸಿದ್ದಾರೆ.

ಆದರೆ ಈ ಪುಟ್ಟ ಈಜುತಾರೆ ಯಶಸ್ಸು ಗಳಿಸುತ್ತಾರೆಂಬುದು ಖಚಿತವಾಗೇನೂ ಇಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಂತ ಅತಿ ದೊಡ್ಡ ಕೂಟದ ಒತ್ತಡವನ್ನು ಈಕೆ ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಕಾದುನೋಡಬೇಕಾಗಿದೆ.

ಆರನೇ ವಯಸ್ಸಿಗೆ ಈಜು:

ಆರನೇ ವಯಸ್ಸಿನಲ್ಲಿ ವಾಟರ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಈಜು ಕಲಿಯಲು ಶುರು ಮಾಡಿದ್ದಾಗಿ ಯು ಹೇಳುತ್ತಾಳೆ.

‘ಆ ವರ್ಷದ ಬೇಸಗೆ ಸಹಿಸಲಸಾಧ್ಯವಾಗಿತ್ತು. ತಂದೆ ನನ್ನನ್ನು ವಾಟರ್‌ಪಾರ್ಕ್‌ಗೆ ಕರೆದೊಯ್ದರು. ಅಲ್ಲಿನ ತಂಪು ನನಗೆ ತುಂಬಾ ಹಿಡಿಸಿತು. ಪುಟ್ಟಮಕ್ಕಳಿಗೆ ಅಲ್ಲಿದ್ದ ಸಣ್ಣ ಕೊಳಗಳಲ್ಲಿ ಈಜಿ ಖುಷಿಪಟ್ಟೆ. ಒಂದು ದಿನ ಕೋಚ್‌ ಒಬ್ಬರು ಇದಕ್ಕಿಂತ ವೇಗವಾಗಿ ಈಜಲು ಆಸೆಯಿದೆಯೇ ಎಂದು ಕೇಳಿದರು’ ಎಂದು ಆಕೆ ವಿವರಿಸುತ್ತಾಳೆ. ನಂತರದ್ದೆಲ್ಲಾ ಇತಿಹಾಸ.

ಯು ಈಗ ಹೆಂಗ್‌ಶುಯಿ ನಗರದ ಹೆಬೈ ತೈಹುವಾ ಜಿನ್ಯೆ ಸ್ಮಿಮಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

‘ನನಗೆ ಹೊರದೇಶದಲ್ಲಿ ಸ್ಪರ್ಧೆಗಳು ಹೇಗಿರುತ್ತವೆ ಎಂಬ ಕಲ್ಪನೆಯಿಲ್ಲ’ ಎಂದು ತಿಳಿಸಿದ್ದಾಳೆ. ಆದರೆ ವಿಶ್ವ ದರ್ಜೆಯ ಸ್ಪರ್ಧೆಗಳ ಅನುಭವ ಪಡೆಯಬೇಕೆಂಬ ಆಸೆಯಿದೆ ಎನ್ನುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.