ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಮೈರಾಜ್‌ ಖಾನ್‌ಗೆ ಐತಿಹಾಸಿಕ ಚಿನ್ನ

ಮಹಿಳಾ ತಂಡಕ್ಕೆ ಕಂಚು

ಪಿಟಿಐ
Published 19 ಜುಲೈ 2022, 5:28 IST
Last Updated 19 ಜುಲೈ 2022, 5:28 IST
ಮೈರಾಜ್ ಅಹ್ಮದ್‌ ಖಾನ್‌
ಮೈರಾಜ್ ಅಹ್ಮದ್‌ ಖಾನ್‌   

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಮೈರಾಜ್‌ ಅಹ್ಮದ್‌ ಖಾನ್‌ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರ ಪುರುಷರ ಸ್ಕೀಟ್‌ ವಿಭಾಗದಲ್ಲಿ ಅಗ್ರಸ್ಥಾನ ಗಳಿಸುವ ಈ ಸಾಧನೆ ಮಾಡಿದ ಮೊದಲ ಭಾರತದ ಶೂಟರ್ ಎಂಬ ಶ್ರೇಯ ತಮ್ಮದಾಗಿಸಿಕೊಂಡರು.

46 ವರ್ಷದ ಮೈರಾಜ್‌, 40 ಶಾಟ್‌ಗಳ ಫೈನಲ್‌ನಲ್ಲಿ ಅಮೋಘ 37 ಪಾಯಿಂಟ್ಸ್ ಕಲೆಹಾಕಿದರು. ದಕ್ಷಿಣ ಕೊರಿಯಾದ ಮಿನ್ಸು ಕಿಮ್‌ (36 ಪಾಯಿಂಟ್ಸ್) ಮತ್ತು ಬ್ರಿಟನ್‌ನ ಬೆನ್‌ ಲೆವೆಲ್ಲಿನ್‌ (26) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು.

ADVERTISEMENT

ಅರ್ಹತಾ ಸುತ್ತಿನಲ್ಲಿ 125ರ ಪೈಕಿ ಮೈರಾಜ್‌ 119ಪಾಯಿಂಟ್ಸ್ ಕಲೆಹಾಕಿದ್ದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ವಿಜಯ್‌ವೀರ್ ಸಿಧು ರ‍್ಯಾಂಕಿಂಗ್ ಸುತ್ತಿಗೆ ಅವಕಾಶ ಪಡೆದರೂ ಪದಕದ ಸುತ್ತಿಗೆ ಅರ್ಹತೆ ಗಳಿಸಲು ವಿಫಲರಾದರು. ಪುರುಷರ 25 ಮೀ. ರ‍್ಯಾಪಿಡ್‌ ಫೈರ್ ಪಿಸ್ತೂಲ್‌ ವಿಭಾಗದಲ್ಲಿ ಕಣಕ್ಕಳಿದಿದ್ದ ಅನೀಶ್ 12ನೇ ಮತ್ತು ಸಮೀರ್ 30ನೇ ಸ್ಥಾನ ಗಳಿಸಿದರು. ಮಹಿಳೆಯರ ಸ್ಕೀಟ್‌ನಲ್ಲಿ ಮುಫದ್ದಾಲ್ ದೀಸ್ವಾಲ 23ನೇ ಸ್ಥಾನ ಗಳಿಸಿದರು.

ಎರಡು ಬಾರಿಯ ಒಲಿಂಪಿಯನ್‌, ಚಾಂಗ್ವಾನ್‌ಗೆ ತೆರಳಿರುವ ಭಾರತ ತಂಡದ ಅತ್ಯಂತ ಹಿರಿಯ ಶೂಟರ್‌ ಆಗಿರುವ ಮೈರಾಜ್‌, 2016ರ ರಿಯೊ ಡಿ ಜನೈರೊ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಇದಕ್ಕೂ ಮೊದಲು ಅಂಜುಮ್‌ ಮೌದ್ಗಿಲ್‌, ಆಶಿ ಚೌಕ್ಶಿ ಮತ್ತು ಸಿಫ್ಟ್‌ ಕೌರ್ ಸಮ್ರಾ ಅವರಿದ್ದ ಭಾರತ ಮಹಿಳಾ ತಂಡವು 50 ಮೀಟರ್ಸ್ ರೈಫಲ್ ತ್ರಿ ಪೋಸಿಷನ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿತು. ಕಂಚಿನ ಪದಕದ ಸುತ್ತಿನಲ್ಲಿ ಈ ಶೂಟರ್‌ಗಳು 16–6ರಿಂದ ಅಸ್ಟ್ರಿಯಾದ ಶೆಲೀನ್‌ ವೈಬೆಲ್‌, ನದಿನ್‌ ಉಂಗ್‌ರಂಕ್ ಮತ್ತು ರೆಬೆಕ್ಕಾ ಕೊಯೆಕ್ ಅವರನ್ನು ಪರಾಭವಗೊಳಿಸಿತು.

ಸೋಮವಾರ ಗೆದ್ದ ತಲಾ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಭಾರತ ತಂಡವು ಪದಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ತಂಡದ ಬಳಿ ಸದ್ಯ ಒಟ್ಟು 13 (ತಲಾ ಐದು ಚಿನ್ನ, ಬೆಳ್ಳಿ ಮತ್ತು 3 ಕಂಚು) ಪದಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.