ADVERTISEMENT

ಐಬಿಎಸ್‌ಎಫ್‌ ಬಿಲಿಯರ್ಡ್ಸ್‌ ಚಾಂಪಿಯನ್‌ ಪಂಕಜ್‌ ಅಡ್ನಾಣಿಗೆ ‘20’ರ ಸಂಭ್ರಮ

ಫೈನಲ್‌ನಲ್ಲಿ ಮ್ಯಾನ್ಮಾರ್‌ನ ನೇ ತ್ವೇ ವೂ ಅವರನ್ನು ಮಣಿಸಿದ ಬೆಂಗಳೂರಿನ ಆಟಗಾರ

ಪಿಟಿಐ
Published 15 ನವೆಂಬರ್ 2018, 15:25 IST
Last Updated 15 ನವೆಂಬರ್ 2018, 15:25 IST
ಪಂಕಜ್ ಅಡ್ವಾನಿ
ಪಂಕಜ್ ಅಡ್ವಾನಿ   

ಯಾಂಗುನ್‌: ಭಾರತದ ಪಂಕಜ್ ಅಡ್ವಾಣಿ ಸತತ ಮೂರನೇ ಬಾರಿ ಐಬಿಎಸ್‌ಎಫ್‌ ಬಿಲಿಯರ್ಡ್ಸ್‌ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಒಟ್ಟು 20 ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.

ಬೆಂಗಳೂರಿನ ಅಡ್ವಾಣಿ, ಗುರುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಮ್ಯಾನ್ಮಾರ್‌ನ ನೇ ತ್ವೇ ವೂ ಅವರನ್ನು ಮಣಿಸಿದರು. ಮ್ಯಾನ್ಮಾರ್‌ನ ಆಟಗಾರನೊಬ್ಬ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್‌ ಸುತ್ತು ಪ್ರವೇಶಿಸಿದ್ದು ಇದೇ ಮೊದಲು. ಸೆಮಿಫೈನಲ್‌ನಲ್ಲಿ ನೇ ತ್ವೇ ವೂ 5–2ರಿಂದ ಮೈಕ್ ರಸೆಲ್ ಅವರನ್ನು ಸೋಲಿಸಿದ್ದರು.

ಮೂರಂಕಿಯ (108) ಬ್ರೇಕ್‌ನೊಂದಿಗೆ ಫೈನಲ್‌ ಪಂದ್ಯದ ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದ ಅಡ್ವಾಣಿ ನಂತರ ಎಡವಿದರು. 147 ಬ್ರೇಕ್‌ನೊಂದಿಗೆ ಮ್ಯಾನ್ಮಾರ್ ಆಟಗಾರ ಪಂದ್ಯದಲ್ಲಿ 1–1ರ ಸಮಬಲ ಸಾಧಿಸಿದರು. ನಂತರ ತಿರುಗೇಟು ನೀಡಿದ ಅಡ್ವಾಣಿ 2–1ರ ಮುನ್ನಡೆ ಸಾಧಿಸಿದರು. ಆದರೆ ಎದುರಾಳಿ ಆಟಗಾರ ಸೋಲೊಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅವರು ಮತ್ತೊಮ್ಮೆ ಮೂರಂಕಿಯ ಬ್ರೇಕ್‌ನೊಂದಿಗೆ ವೈಯಕ್ತಿಕ ಎರಡನೇ ಫ್ರೇಮ್‌ ಗೆದ್ದರು.

ADVERTISEMENT

ಅಪಾಯ ಅರಿತ ಅಡ್ವಾಣಿ ನಂತರ ‍ಪ್ರಬಲ ಆಟವಾಡಿ ಎದುರಾಳಿಯನ್ನು ದಂಗಾಗಿಸಿದರು. ಸತತ ನಾಲ್ಕು ಬಾರಿ ‘ಶತಕ’ ಬಾರಿಸಿದ ಅವರು ಪಂದ್ಯ ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು.

ಸ್ಕೋರ್‌ ವಿವರ: ಫೈನಲ್‌: ಪಂಕಜ್ ಅಡ್ವಾಣಿಗೆ ನೇ ತ್ವೇ ವಿರುದ್ಧ 6–2ರಿಂದ ಗೆಲುವು (150–21, 0–151, 151–0, 4–151, 151–11, 150–81, 151–109, 151–0). ಸೆಮಿಫೈನಲ್‌: ಪಂಕಜ್‌ ಅಡ್ವಾಣಿಗೆ ಡೇವಿಡ್ ಕಾಸಿಯರ್‌ ಎದುರು 5–0ಯಿಂದ ಜಯ (150–73, 152–17, 152–8, 151–4, 157–86).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.