ADVERTISEMENT

ಪ್ಯಾರಾಲಿಂಪಿಕ್ಸ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಐವರು ಅಥ್ಲೀಟ್‌ಗಳು

ಪಿಟಿಐ
Published 22 ಆಗಸ್ಟ್ 2021, 13:50 IST
Last Updated 22 ಆಗಸ್ಟ್ 2021, 13:50 IST
ಮರಿಯಪ್ಪನ್ ತಂಗವೇಲು –ಪ್ರಜಾವಾಣಿ ಚಿತ್ರ
ಮರಿಯಪ್ಪನ್ ತಂಗವೇಲು –ಪ್ರಜಾವಾಣಿ ಚಿತ್ರ   

ಟೋಕಿಯೊ: ಭಾರತದ ಐವರು ಅಥ್ಲೀಟ್‌ಗಳು ಹಾಗೂ ಆರು ಮಂದಿ ಅಧಿಕಾರಿಗಳು ಟೋಕಿಯೊ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಚೆಫ್‌ ಡಿ ಮಿಷನ್‌ ಗುರುಶರಣ್ ಸಿಂಗ್‌ ಭಾನುವಾರ ಈ ವಿಷಯ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳ ಸಂಖ್ಯೆಗೆ ಮಿತಿ ಇಲ್ಲ. ಆದರೆ ಇದುವರೆಗೆ ಭಾರತದ ಏಳು ಮಂದಿ ಪ್ಯಾರಾ ಅಥ್ಲೀಟ್‌ಗಳು ಮಾತ್ರ ಟೋಕಿಯೊ ತಲುಪಿದ್ದಾರೆ.

ಏಳು ಮಂದಿಯಲ್ಲಿಟೇಬಲ್ ಟೆನಿಸ್ ಆಟಗಾರ್ತಿಯರಾದ ಸೋನಲ್ ಪಟೇಲ್ ಮತ್ತು ಭವಿನಾ ಪಟೇಲ್ ಇದ್ದಾರೆ. ಬುಧವಾರ ಇವರು ಕೂಟದಲ್ಲಿ ಕಣಕ್ಕಿಳಿಯಲಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದೇ 24ರಿಂದ ಆರಂಭವಾಗಲಿರುವಕ್ರೀಡಾಕೂಟಕ್ಕೆ ಜಪಾನ್ ದೊರೆ ನರುಹಿಟೊ ಚಾಲನೆ ನೀಡಲಿದ್ದಾರೆ.

ADVERTISEMENT

ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೂ ಆರು ಮಂದಿ ಅಧಿಕಾರಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಇಲ್ಲಿಯೂ ಅದೇ ನಿಯಮ ಅನುಸರಿಸಲಾಗುತ್ತಿದೆ.

ಭಾರತದ ಧ್ವಜಧಾರಿ ಮರಿಯಪ್ಪನ್ ತಂಗವೇಲು, ಡಿಸ್ಕಸ್‌ ಥ್ರೊ ಪಟು ವಿನೋದ್‌ ಕುಮಾರ್‌, ಜಾವೆಲಿನ್ ಥ್ರೊ ಪಟು ಟೆಕ್ ಚಂದ್‌ ಮತ್ತು ಪವರ್‌ಲಿಫ್ಟ್‌ರ್‌ಗಳಾದ ಜಯದೀಪ್‌ ಮತ್ತು ಸಕೀನಾ ಖಾತುನ್ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಮಾರಂಭದಲ್ಲಿ ಭಾಗವಹಿಸುವ ಆರು ಅಧಿಕಾರಿಗಳ ಪೈಕಿ ನಾಲ್ಕು ಮಂದಿಯನ್ನು ಸದ್ಯಕ್ಕೆ ನಿರ್ಧರಿಸಲಾಗಿದೆ. ಚೆಫ್ ಡಿ ಮಿಷನ್‌, ಡೆಪ್ಯುಟಿ ಚೆಫ್ ಡಿ ಮಿಷನ್‌ ಅರ್ಹಾನ್ ಬಗತಿ, ಕೋವಿಡ್‌ಗೆ ಸಂಬಂಧಿಸಿದ ಸಂಪರ್ಕ ಅಧಿಕಾರಿ ವಿ.ಕೆ. ದಾಬಸ್‌ ಮತ್ತು ಮರಿಯಪ್ಪನ್ ಅವರ ಕೋಚ್‌ ಮತ್ತು ಪ್ಯಾರಾ ಅಥ್ಲೆಟಿಕ್ಸ್ ಮುಖ್ಯಸ್ಥ ಸತ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ.

ಭಾರತದ ಅಥ್ಲೀಟ್‌ಗಳ ಮೂರನೇ ತಂಡವು ಸೋಮವಾರ ಟೋಕಿಯೊಗೆ ಪ್ರಯಾಣ ಬೆಳೆಸಲಿದೆ. ಆದರೆ ಇವರಲ್ಲಿ ಕೆಲವು ಮಂದಿ ಅಭ್ಯಾಸ ಆರಂಭಿಸುವ ಮೊದಲು ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.