
ಕಲಬುರಗಿ: ಜಿಲ್ಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಲಭ್ಯಗಳಿಲ್ಲ. ಆದರೆ, ಸಾಧನೆಯ ಹಸಿವಿರುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಇದಕ್ಕೆ ಬ್ಯಾಸ್ಕೆಟ್‌ಬಾಲ್ ಪ್ರತಿಭೆ ಅಭಿಷೇಕ ಸಾಕ್ಷಿ.
ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಎರಡು ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ವಿಭಾಗೀಯ ಟೂರ್ನಿಗಳಲ್ಲಿ ಹಲವು ಬಾರಿ ಪ್ರಾದೇಶಿಕ ತಂಡವನ್ನು ಪ್ರತಿನಿಧಿಸಿದ್ದಾರೆ. ಟೂರ್ನಿಗಳಲ್ಲಿ ಉತ್ತಮ ಆಟಗಾರ ಎಂಬ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
‘ಇಲ್ಲಿನ ಅಂಗಣ ಸಿಮೆಂಟ್‌ನಿಂದ ನಿರ್ಮಿಸಲಾಗಿದ್ದು, ಮೂಲಸೌಲಭ್ಯಗಳಿಲ್ಲ. ಹೆಚ್ಚು ಹೊತ್ತು ಅಭ್ಯಾಸ ಮಾಡಿದರೆ ಮೊಣಕಾಲು ನೋವು ಕಾಣಿಸುತ್ತದೆ. ಅಲ್ಲದೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಸಿಂಥೆಟಿಕ್ ಅಂಗಣದಲ್ಲಿ ಆಯೋಜಿಸುವುದರಿಂದ ಲಯಕಂಡುಕೊಳ್ಳಲು ಸಮಯಬೇಕಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿಯೂ ಒಂದು ಸಿಂಥೆಟಿಕ್ ಅಂಗಣವಿದ್ದರೆ ಉನ್ನತ ಸಾಧನೆ ಮಾಡಬಹುದು’ ಎಂದು ಅಭಿಷೇಕ್ ಹೇಳಿದರು.
ಅಭಿಷೇಕ್ ಅವರದ್ದು ಮಧ್ಯಮ ವರ್ಗದ ಕುಟುಂಬ. ತಾಯಿ ಸಿದ್ದಮ್ಮ, ಅಂಗನವಾಡಿಯಲ್ಲಿ ಸಹಾಯಕಿ ಆಗಿದ್ದಾರೆ. ತಂದೆ ಮಲ್ಲಿಕಾರ್ಜುನ್, ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಿದ್ದರೂ ಮಗನ ಬ್ಯಾಸ್ಕೆಟ್‌ಬಾಲ್ ಆಡುವ ಆಸೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಅಭಿಷೇಕ್‌ಗೆ 7ನೇ ತರಗತಿಯಲ್ಲಿದ್ದಾಗ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಮೇಲೆ ಆಸಕ್ತಿ ಮೂಡಿತು. ಆರಂಭದಲ್ಲಿ ಕೇಂದ್ರೀಯ ವಿದ್ಯಾಲಯಗಳಿಂದ ಆಯೋಜಿಸುವ ಕ್ಲಸ್ಟರ್, ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಭಿಷೇಕ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಅವರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷಕುಮಾರ. ಅವರ ಪ್ರತಿಭೆಗೆ ನೀರೆರೆದಿದ್ದು ತರಬೇತುದಾರ ಶಂಕರ ಸುರೇಶ.
ಶಂಕರ ಅವರು, ನಗರದ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಬ್ಯಾಸ್ಕೆಟ್‌ಬಾಲ್ ಅಂಗಣದಲ್ಲಿ ನಿತ್ಯ ತರಬೇತಿ ನೀಡುವ ಮೂಲಕ ಪ್ರತಿಭೆಯನ್ನು ರಾಷ್ಟ್ರ ಮಟ್ಟದವರೆಗೆ ಕೊಂಡೊಯ್ದಿದ್ದಾರೆ. ಭವಿಷ್ಯದಲ್ಲಿ ಇನ್ನೂ ಉನ್ನತ ಸಾಧನೆಯ ಗುರಿ ಹೊಂದಿದ್ದಾರೆ.
‘ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಅಗತ್ಯವಿರುವ ಮೂಲಸೌಲಭ್ಯಗಳಿಲ್ಲ. ಈಗ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಬ್ಯಾಸ್ಕೆಟ್‌ಬಾಲ್ ಅಂಗಣ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಜಿಲ್ಲೆಯಲ್ಲಿ ಆಯೋಜನೆ ಮಾಡಬೇಕು. ಆಗ ಸಾಕಷ್ಟು ಮಂದಿಗೆ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಅರಿವು ಮೂಡುತ್ತದೆ’ ಎಂದು ಶಂಕರ ಸುರೇಶ ಹೇಳಿದರು.
ಅಭಿಷೇಕ್ ಉತ್ತಮ ಪ್ರತಿಭೆಯಾಗಿದ್ದು ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಅಗತ್ಯವಿದೆ. ಜಿಲ್ಲೆಯಲ್ಲಿ ಕ್ರೀಡೆಯ ಮೂಲಸೌಲಭ್ಯಗಳು ದೊರೆತರೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬಹುದಾಗಿದೆಶಂಕರ ಸುರೇಶ, ತರಬೇತುದಾರ
ಫಿಬಾ ವರ್ಲ್ಡ್‌ಕಪ್‌ನಂತಹ ಟೂರ್ನಿಗಳಲ್ಲಿ ಆಡುವಾಸೆಯಿದೆ. ಬೆಂಗಳೂರಿನಂತಹ ನಗರಗಳಲ್ಲಿರುವ ಸೌಲಭ್ಯ ನಮ್ಮಲ್ಲಿಲ್ಲ. ಹೊಸ ಬ್ಯಾಸ್ಕೆಟ್‌ಬಾಲ್ ಅಂಗಣ ನಿರ್ಮಾಣವಾಗುತ್ತಿರುವುದು ಹೊಸ ಭರವಸೆ ಮೂಡಿಸಿದೆಅಭಿಷೇಕ, ಬ್ಯಾಸ್ಕೆಟ್‌ಬಾಲ್ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.