ADVERTISEMENT

ಆರ್ಚರಿ ಕೋಚ್ ತಿವಾರಿಗೆ ಪಾರ್ಶ್ವವಾಯು: ಸ್ಥಿತಿ ಗಂಭೀರ

ಪಿಟಿಐ
Published 13 ಆಗಸ್ಟ್ 2021, 12:36 IST
Last Updated 13 ಆಗಸ್ಟ್ 2021, 12:36 IST

ಜಮಶೆಡ್‌ಪುರ: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ, ಭಾರತದ ಆರ್ಚರಿ ಕೋಚ್‌ ಧರ್ಮೇಂದ್ರ ತಿವಾರಿ ಅವರಿಗೆ ಪಾರ್ಶ್ವವಾಯು ಬಾಧಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ತಾರಾ ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ, ಆತನು ದಾಸ್ ಮತ್ತಿತರಿಗೆ ತರಬೇತಿ ನೀಡಿರುವ 49 ವರ್ಷದ ಧರ್ಮೇಂದ್ರ ಅವರಿಗೆ ಗುರುವಾರ ಮೆದುಳಿನ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಸದ್ಯ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ.

‘ಸರ್‌ (ಧರ್ಮೆಂದ್ರ ತಿವಾರಿ) ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಶೇಕಡಾ ಎರಡರಷ್ಟು ಚೇತರಿಕೆ ಅವರಲ್ಲಿ ಕಾಣುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ‘ ಎಂದು ಭಾರತದ ಮಾಜಿ ಆರ್ಚರಿ ಆಟಗಾರರೊಬ್ಬರು ಹೇಳಿದ್ದಾರೆ.

ADVERTISEMENT

ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡಕ್ಕೆ ತಿವಾರಿ ತರಬೇತಿ ನೀಡಿದ್ದರು. ಬುಧವಾರ ಬೆಳಿಗ್ಗೆ ಅವರಿಗೆ ಪಾರ್ಶ್ವವಾಯು ಬಾಧಿಸಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಸಿಟಿ ಸ್ಕ್ಯಾನ್ ಮೂಲಕ ತಿಳಿದುಬಂದಿತ್ತು.

1993ರಲ್ಲಿ ಆರ್ಚರಿ ಕ್ರೀಡೆಯಿಂದ ನಿವೃತ್ತರಾಗಿರುವ ತಿವಾರಿ, ನಂತರ ತರಬೇತಿಯತ್ತ ಮುಖ ಮಾಡಿದ್ದರು. ಜಾರ್ಖಂಡ್‌ನಲ್ಲಿ ಆರ್ಚರಿ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1996ರಿಂದ ಟಾಟಾ ಆರ್ಚರಿ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.