ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತು ಪ್ರವೇಶಿಸಿದ ಅದಿತಿ, ಸಹರ್ಷ್‌

ಪುರುಷರ ಎರಡೂ ವಿಭಾಗಗಳಲ್ಲಿ ‘ತೇರ್ಗಡೆ’ಯಾದ ಬೆಂಗಳೂರಿನ ತಿಲಕ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 15:57 IST
Last Updated 29 ಜುಲೈ 2025, 15:57 IST
ಅದಿತಿ ಆಚಾರ್ಯ
ಅದಿತಿ ಆಚಾರ್ಯ   

ಮಂಗಳೂರು: ದಕ್ಷಿಣ ಕನ್ನಡದ ಅದಿತಿ ಆಚಾರ್ಯ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯ ಸೀನಿಯರ್ ಮತ್ತು 19 ವರ್ಷದೊಳಗಿನ ಮಹಿಳೆಯರ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಿದರು. ಬೆಂಗಳೂರಿನ ತಿಲಕ್ ಬಿ.ಶೆಟ್ಟಿ ಪುರುಷರ ಎರಡೂ ವಿಭಾಗಗಳ ಮುಖ್ಯ ಸುತ್ತು ತಲುಪಿದ್ದು ದಕ್ಷಿಣ ಕನ್ನಡದ ಸಹರ್ಷ್ ಪ್ರಭು ಸೀನಿಯರ್‌ ಪುರುಷರ ಮುಖ್ಯ ಸುತ್ತಿಗೆ ಲಗ್ಗೆ ಇಟ್ಟರು.‌

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ನಗರದ ಉರ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವ ಟೂರ್ನಿಯ ಮಹಿಳೆಯರ ಸೀನಿಯರ್ ವಿಭಾಗದ ಅರ್ಹತಾ ಹಂತದ ಕೊನೆಯ ಸುತ್ತಿನಲ್ಲಿ ಅದಿತಿ, ಬೆಂಗಳೂರಿನ ಕೀರ್ತನಾ ವಿರುದ್ಧ 15-7, 15-11ರಲ್ಲಿ ಗೆದ್ದರು. 19 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರಿನ ಸನಿಹಾ ಎದುರು 21-6, 21-4ರಲ್ಲಿ ಜಯ ಸಾಧಿಸಿದರು. ಬುಧವಾರ ಸೀನಿಯರ್ ವಿಭಾಗದಲ್ಲಿ ನಯನಿಕಾ ವಿರುದ್ಧ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ 9ನೇ ಶ್ರೇಯಾಂಕಿತೆ ಅನನ್ಯಶ್ರೀ ವಿರುದ್ಧ ಅದಿತಿ ಕಣಕ್ಕೆ ಇಳಿಯುವರು.

19 ವರ್ಷದೊಳಗಿನವರ ವಿಭಾಗದಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ ಹಾರ್ದಿಕ್ ಮೊಹಾಂತಿ ಎದುರು ಅರ್ಹತಾ ಹಂತದ ನಾಲ್ಕನೇ ಸುತ್ತಿನಲ್ಲಿ ಗೆದ್ದು ಸಹರ್ಷ್ ಸೀನಿಯರ್ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಿದರು. ಬುಧವಾರ ನಡೆಯುವ ಪಂದ್ಯದಲ್ಲಿ ಅವರು ಶ್ರೇಯಾಂಕ ರಹಿತ ಆಟಗಾರ ಪ್ರದ್ಯೋತ್ ರವಿ ವಿರುದ್ಧ ಸೆಣಸುವರು. ತಿಲಕ್ ಶೆಟ್ಟಿ ಸೀನಿಯರ್ ವಿಭಾಗದಲ್ಲಿ 4ನೇ ಶ್ರೇಯಾಂಕಿತ ತುಷಾರ್ ಸುವೀರ್ ವಿರುದ್ಧ ಕಣಕ್ಕೆ ಇಳಿಯಲಿದ್ದು 19 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಅಭಿನವ್ ಗರ್ಗ್‌ ಅವರನ್ನು ಎದುರಿಸಲಿದ್ದಾರೆ. 

ADVERTISEMENT

ಅರ್ಹತಾ ಹಂತದ ಕೊನೆಯ ಸುತ್ತಿನ ಫಲಿತಾಂಶಗಳು: ಮೈಸೂರಿನ ವಿಶಾಲ್‌ಗೆ ಬೆಂಗಳೂರಿನ ಪ್ರಣವ್‌ ವಿರುದ್ಧ ಜಯ. ಬೆಂಗಳೂರಿನ ತಿಲಕ್ ಶೆಟ್ಟಿಗೆ ಬೆಂಗಳೂರಿನ ಅತೀಕ್ಷ್ ವಿರುದ್ಧ, ಬೆಂಗಳೂರಿನ ಶ್ಯಾಮ್ ಬಿಂಡಿಗನವಿಲೆಗೆ ಬೆಂಗಳೂರಿನ ಶಮಂತ್ ವಿರುದ್ಧ, ಮೈಸೂರಿನ ಭುವನ್‌ಗೆ ಬೆಂಗಳೂರಿನ ವರುಣ್‌ ವಿರುದ್ಧ, ಬೆಂಗಳೂರಿನ ರಾಘವೇಂದ್ರಗೆ ಬೆಂಗಳೂರಿನ ಕೌಶಿಕ್‌ ವಿರುದ್ಧ, ದಕ್ಷಿಣ ಕನ್ನಡದ ಸಹರ್ಷ್‌ಗೆ ಬೆಂಗಳೂರಿನ ಹಾರ್ದಿಕ್ ಮೊಹಾಂತಿ ವಿರುದ್ಧ, ಬೆಂಗಳೂರಿನ ಪ್ರತೀಶ್‌ಗೆ ಕೊಡಗಿನ ಜೈದ್‌ ವಿರುದ್ಧ ಗೆಲುವು. ಮೈಸೂರಿನ ಗೌರವ್‌ಗೆ ವಾಕ್ ಓವರ್. 19 ವರ್ಷದೊಳಗಿನವರು: ಬೆಂಗಳೂರಿನ ತಿಲಕ್‌ಗೆ ಬೆಂಗಳೂರಿನ ಇಂದ್ರಜ್‌ ವಿರುದ್ಧ, ಬೆಂಗಳೂರಿನ ಶಿವರಾಜ್‌ಗೆ ಬೆಂಗಳೂರಿನ ಅದಿತ್ ವಿರುದ್ಧ, ಬೆಂಗಳೂರಿನ ವರುಣ್‌ಗೆ ಉಡುಪಿಯ ಕೌಶಿಕ್ ಬೆಂಗ್ರೆ ವಿರುದ್ಧ, ಬೆಳಗಾವಿಯ ಮಹಿಮ್‌ಗೆ ಬೆಂಗಳೂರಿನ ತೋಷನ್‌ ವಿರುದ್ಧ, ಬೆಂಗಳೂರಿನ ಸ್ವಯಂಗೆ ಬೆಂಗಳೂರಿನ ವಿಸ್ಮಯ್‌ ವಿರುದ್ಧ, ಬೆಂಗಳೂರಿನ ಹಾರ್ದಿಕ್‌ಗೆ ಬೆಂಗಳೂರಿನ ಫಾಲಕ್ಷಯ್ಯ ವಿರುದ್ಧ, ಬೆಂಗಳೂರಿನ ಶ್ರೇಯಸ್‌ಗೆ ಬೆಂಗಳೂರಿನ ಕರನ್ಶ್‌ ವಿರುದ್ಧ ಬೆಂಗಳೂರಿನ ನೀಲೇಶ್‌ಗೆ ದಕ್ಷಿಣ ಕನ್ನಡದ ನಿಕೇತನ್ ವಿರು‌ದ್ಧ ಜಯ.

ಸೀನಿಯರ್ ಮಹಿಳೆಯರು: ಬೆಂಗಳೂರಿನ ಬನಶ್ರೀ ಪಾಟೀಲಗೆ ಬೆಂಗಳೂರಿನ ಖುಷಿ ವಿರುದ್ಧ, ಅದಿತಿಗೆ ಬೆಂಗಳೂರಿನ ಕೀರ್ತನಾ ವಿರುದ್ಧ, ಬೆಂಗಳೂರಿನ ಅನ್ವಿತಾಗೆ ಬೆಂಗಳೂರಿನ ವಿಭಾ ವಿರುದ್ಧ, ಬೆಂಗಳೂರಿನ ಗೀತಾಂಜಲಿಗೆ ಬೆಂಗಳೂರಿನ ಹೇಮಿತಾ ವಿರುದ್ಧ, ಬೆಂಗಳೂರಿನ ಪ್ರಾಪ್ತಿಗೆ ಬೆಂಗಳೂರಿನ ರೀನಾ ವಿರುದ್ಧ, ಬೆಂಗಳೂರಿನ ಕಲಂದಿಕಾಗೆ ಬೆಂಗಳೂರಿನ ಸನಿಹಾ ವಿರುದ್ಧ, ಬೆಂಗಳೂರಿನ ನಮಿತಾಗೆ ಉಡುಪಿಯ ಬಿಂದುಶ್ರೀ ವಿರುದ್ಧ, ಬೆಂಗಳೂರು ಗ್ರಾಮಾಂತರದ ದೀಪ್ತಿಕಾಗೆ ಬೆಂಗಳೂರಿನ ಸಾನ್ವಿ ವಿರುದ್ಧ ಗೆಲುವು. 

ಸಹರ್ಷ್ ಪ್ರಭು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.