ADVERTISEMENT

Paris Olympics 2024: ನಿರಾಶ್ರಿತರ ಧ್ವನಿಯಾದ ಮಸೋಮಾ ಅಲಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ಮಸೋಮಾ ಅಲಿ ಝಾದಾ&nbsp; &nbsp;</p></div>

ಮಸೋಮಾ ಅಲಿ ಝಾದಾ   

   

–ಎಎಫ್‌ಪಿ ಚಿತ್ರ 

ಪ್ಯಾರಿಸ್: ‘ತಮ್ಮ ತಾಯ್ನೆಲವನ್ನು ಅನಿವಾರ್ಯವಾಗಿ ತೊರೆದು ಹೋದವರ ಸಮೂಹವನ್ನು ಪ್ರತಿನಿಧಿಸಲು ಹೆಮ್ಮೆಯೆನಿಸುತ್ತಿದೆ’ ಎಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರೆಫ್ಯೂಜಿ ತಂಡದ ಚೆಫ್ ಡಿ ಮಿಷನ್ ಆಗಿರುವ ಒಲಿಂಪಿಯನ್ ಸೈಕ್ಲಿಸ್ಟ್ ಮಸೋಮಾ ಅಲಿ ಝಾದಾ ಹೇಳಿದ್ದಾರೆ. 

ADVERTISEMENT

ಅಫ್ಗಾನಿಸ್ತಾನದ 28 ವರ್ಷದ ಮಸೋಮಾ ಅವರೂ ಕೆಲವು ವರ್ಷಗಳ ಹಿಂದ ನಿರಾಶ್ರಿತರ ಶಿಬಿರದ ಕಷ್ಟ, ನಷ್ಟಗಳನ್ನು ಅನುಭವಿಸಿದವರು. ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ದಾಳಿಗೆ ನಲುಗಿ ಬಾಲ್ಯದಲ್ಲಿಯೇ ದೇಶ ಬಿಟ್ಟವರು. ಬೇರೆ ದೇಶದಲ್ಲಿ  ಆಶ್ರಯ ಪಡೆದಿದ್ದರು. ಆದರೂ ಛಲ ಬಿಡದೇ ಸೈಕ್ಲಿಸ್ಟ್ ಆಗಿ ಬೆಳೆದರು. 

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ರೆಫ್ಯೂಜಿ ತಂಡವನ್ನು ಪ್ರತಿನಿಧಿಸಿದರು. ಲಕ್ಷಾಂತರ ನಿರಾಶ್ರಿತರಿಗೆ ಸ್ಫೂರ್ತಿಯ ಸೆಲೆಯಾದರು. 

ಈ ಬಾರಿಯ ಕೂಟದಲ್ಲಿ 11 ದೇಶಗಳ 36 ಅಥ್ಲೀಟ್‌ಗಳು ನಿರಾಶ್ರಿತರ ತಂಡದಲ್ಲಿದ್ದಾರೆ. 12 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 

‘ವಿಶೇಷವಾಗಿರುವ ಈ ತಂಡವನ್ನು ಪ್ರತಿನಿಧಿಸುತ್ತಿರುವುದು ನನಗೆ ಲಭಿಸಿರುವ ದೊಡ್ಡ ಗೌರವ. ನನಗೆ ಬಹಳ ಕರಾಳ ಅನುಭವಗಳು ಆಗಿವೆ. ಅದರಿಂದಾಗಿಯೇ ನಾನು ಗೌರವಯುತವಾದ ಜೀವನ ಕಟ್ಟಿಕೊಳ್ಳಲು ಛಲದಿಂದ ಮುನ್ನುಗ್ಗಿದೆ. ನನ್ನನ್ನು ನಾನೇ ಕೆಲವು ಪ್ರಶ್ನೆಗಳನ್ನು ಕೇಳಿಕೊಂಡೆ. ಅವುಗಳಿಗೆ ಉತ್ತರ ಹುಡುಕುತ್ತ ಸಾಗಿದೆ’ ಎಂದರು. 

ಎಂಟು ವರ್ಷಗಳ ಹಿಂದೆ ಅವರು ಫ್ರಾನ್ಸ್‌ಗೆ ಬಂದ ಮೇಲೆ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದಾರೆ. 

‘ಫ್ರಾನ್ಸ್‌ನಲ್ಲಿ ನಾನು ಸ್ವತಂತ್ರವಾಗಿ ಜೀವನ ಮಾಡಬಲ್ಲೆ. ಯಾವಾಗ ಬೇಕಾದರೂ, ಎಲ್ಲಿಗಾದರೂ ಹೋಗಬಹುದು. ಆದರೆ ನನ್ನ ತವರು ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಸರಿಯಿಲ್ಲ. ಅವರಿಗೆ ಬದುಕುವ ಮುಕ್ತ ವಾತಾವರಣವಿಲ್ಲ. ಅದಕ್ಕಾಗಿ ನನಗೆ ಬಹಳ ದುಃಖವಾಗಿದೆ’ ಎಂದು ಝದಾ ಪತ್ರಕರ್ತರ ಮುಂದೆ ಬೇಸರ ವ್ಯಕ್ತಪಡಿಸಿದರು.

‘ಇಷ್ಟೆಲ್ಲದರ ನಡುವೆಯೂ ಈ ಒಲಿಂಪಿಕ್ಸ್‌ನಲ್ಲಿ ಅಫ್ಗಾನಿಸ್ತಾನದ ಮೂವರು ಮಹಿಳೆಯರು ಸ್ಪರ್ಧಿಸುತ್ತಿದ್ದಾರೆ. ಇದು ನಿಜಕ್ಕೂ ಸಂತಸ ಪಡುವ ವಿಚಾರ. ಅವರು ಪುರುಷರಿಗೆ ಸಮಬಲವಾಗಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.