ADVERTISEMENT

ಪ್ಯಾರಾಲಿಂಪಿಕ್ಸ್‌ಗೆ ಅಫ್ಗಾನ್ ಅಥ್ಲೀಟ್‌ಗಳಿಲ್ಲ

ಏಜೆನ್ಸೀಸ್
Published 16 ಆಗಸ್ಟ್ 2021, 12:18 IST
Last Updated 16 ಆಗಸ್ಟ್ 2021, 12:18 IST
ಟೋಕಿಯೊದ ಕ್ರೀಡಾಂಗಣವೊಂದರ ಹೊರಗೆ ಪ್ಯಾರಾಲಿಂಪಿಕ್ಸ್‌ ಲಾಂಛನ ಪ್ರದರ್ಶಿಸಲಾಗಿದೆ –ರಾಯಿಟರ್ಸ್ ಚಿತ್ರ
ಟೋಕಿಯೊದ ಕ್ರೀಡಾಂಗಣವೊಂದರ ಹೊರಗೆ ಪ್ಯಾರಾಲಿಂಪಿಕ್ಸ್‌ ಲಾಂಛನ ಪ್ರದರ್ಶಿಸಲಾಗಿದೆ –ರಾಯಿಟರ್ಸ್ ಚಿತ್ರ   

ಟೋಕಿಯೊ: ದೇಶದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿಯಿಂದಾಗಿ ಅಫ್ಗಾನಿಸ್ತಾನದ ಅಥ್ಲೀಟ್‌ಗಳು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಸೋಮವಾರ ತಿಳಿಸಿದೆ.

ಅಫ್ಗಾನಿಸ್ತಾನದಿಂದ ಟೇಕ್ವಾಂಡೊ ಪಟುಗಳಾದ ಜಕಿಯಾ ಖುದಾದದಿ ಮತ್ತು ಹೊಸೇನ್ ರಸೌಲಿ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಈ ಪೈಕಿ 23 ವರ್ಷದ ಜಕಿಯಾ ದೇಶವನ್ನು ಪ್ರತಿನಿಧಿಸುವ ಮೊದಲ ಮಹಿಳೆ ಎನಿಸಿಕೊಂಡಿದ್ದರು.

ಆದರೆ ದೇಶದ ಆಡಳಿತವನ್ನು ತಾಲಿಬಾನ್‌ ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಇವರಿಬ್ಬರು ಜಪಾನ್‌ಗೆ ಪ್ರಯಾಣ ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಪ್ಯಾರಾಲಿಂಪಿಕ್ ಸಮಿತಿಯ ವಕ್ತಾರ ಕ್ರೇಗ್ ಸ್ಪೆನ್ಸ್‌ ತಿಳಿಸಿದ್ದಾರೆ.

ADVERTISEMENT

ವ್ಹೀಲ್ ಚೇರ್‌, ಕೃತಕ ಅಂಗ ದುರಸ್ತಿ

ಕ್ರೀಡಾಪಟುಗಳು ಧರಿಸುವ ಕೃತಕ ಅಂಗ, ಬಳಸುವ ವ್ಹೀಲ್ ಚೇರ್‌ ಹಾಗೂ ಇತರ ಉಪಕರಣಗಳ ದುರಸ್ತಿಗೆ ಆಯೋಜಕರು ಕ್ರೀಡಾಗ್ರಾಮದಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆದಿದ್ದಾರೆ.

ಕೇಂದ್ರದಲ್ಲಿ ದುರಸ್ತಿ ಮತ್ತು ನಿರ್ವಹಣೆ ಮಾಡಲು 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಇರಿಸಲಾಗಿದೆ. 14 ಕಡೆಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಅಲ್ಲೆಲ್ಲ ದುರಸ್ತಿ ಮಾಡುವ ಸಿಬ್ಬಂದಿಯನ್ನು ಒಳಗೊಂಡ ಬೂತ್ ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರೇಕ್ಷಕರಿಗೆ ಪ್ರವೇಶವಿಲ್ಲ

ಒಲಿಂಪಿಕ್ಸ್‌ನಂತೆ ಪ್ಯಾರಾಲಿಂಪಿಕ್ಸ್‌ಗೂ ಪ್ರೇಕ್ಷಕರನ್ನು ಬಿಡದೇ ಇರಲು ನಿರ್ಧರಿಸಲಾಗಿದೆ ಎಂದು ಟೋಕಿಯೊ ಮೇಯರ್ ತಿಳಿಸಿದ್ದಾರೆ. ಇದೇ 24ರಂದು ಪ್ಯಾರಾಲಿಂಪಿಕ್ಸ್ ಆರಂಭವಾಗಲಿದೆ. ಕೆಲವು ದೇಶದ ಪ್ರತಿನಿಧಿಗಳು ಈಗಾಗಲೇ ಜಪಾನ್ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಎಲ್ಲ ಕ್ರಮಗಳ ನಡುವೆಯೂ ಕೊರೊನಾ ಪ್ರಕರಣಗಳು ಜಪಾನ್‌ನಲ್ಲಿ ಏರುಗತಿಯಲ್ಲೇ ಸಾಗುತ್ತಿವೆ. ಹೀಗಾಗಿ ಪ್ರೇಕ್ಷಕರಿಲ್ಲದೆ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.