ADVERTISEMENT

ಟಾಪ್‌ನಲ್ಲಿ ಸಿಂಗಲ್ಸ್‌ ಸ್ಪರ್ಧಿಗಳಿಗೆ ಸಿಗದ ಅವಕಾಶ

ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) ನಿರಾಸಕ್ತಿ

ಪಿಟಿಐ
Published 3 ಮೇ 2019, 20:15 IST
Last Updated 3 ಮೇ 2019, 20:15 IST
ಡಬಲ್ಸ್‌ ವಿಬಾಗದ ಆಟಗಾರ ರೋಹನ್‌ ಬೋಪಣ್ಣ
ಡಬಲ್ಸ್‌ ವಿಬಾಗದ ಆಟಗಾರ ರೋಹನ್‌ ಬೋಪಣ್ಣ   

ನವದೆಹಲಿ: ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ (ಟಾಪ್‌) ಯೋಜನೆಯಲ್ಲಿ ಭಾರತದ ಪ್ರಮುಖ ಸಿಂಗಲ್ಸ್‌ ಸ್ಪರ್ಧಿಗಳ ಹೆಸರು ಸೇರಿಸಲು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಪ್ರಯತ್ನಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ಅಂಕಿತಾ ರೈನಾ ಅವರು ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದರು. ಅವರ ಹೆಸರನ್ನು ಟಾಪ್ಸ್‌ ಯೋಜನೆಗೆ ಸೇರಿಸುವ ನಿಟ್ಟಿನಲ್ಲಿ ಎಐಟಿಎ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ. ಆದರೆ ಎಐಟಿಎ ಈ ಆರೋಪವನ್ನು ಅಲ್ಲಗಳೆದಿದೆ.

‘ಟಾಪ್ಸ್‌ ಯೋಜನೆಗೆ ಪ್ರಜ್ಞೇಶ್‌ ಮತ್ತು ಅಂಕಿತಾ ಅವರ ಹೆಸರನ್ನು ಸೇರಿಸುವಂತೆ ಈ ಹಿಂದೆಯೇ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈ ಸಂಬಂಧ ಚರ್ಚಿಸಲು ನಮಗೆ ಇದುವರೆಗೂ ಯಾರೂ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನಾವು ಸರ್ಕಾರದ ಮೇಲೆ ಒತ್ತಡ ಹೇರಲು ಆಗುವುದಿಲ್ಲ’ ಎಂದು ಎಐಟಿಎ ಮಹಾ ಕಾರ್ಯದರ್ಶಿ ಹಿರೋಣ್ಮಯ್‌ ಚಟರ್ಜಿ ತಿಳಿಸಿದ್ದಾರೆ.

ADVERTISEMENT

ಪ್ರಜ್ಞೇಶ್‌, ಯೂಕಿ ಭಾಂಬ್ರಿ, ರಾಮಕುಮಾರ್‌ ರಾಮನಾಥನ್‌, ಅಂಕಿತಾ, ಕರ್ಮನ್‌ಕೌರ್ ಥಾಂಡಿ, ಪ್ರಾರ್ಥನಾ ತೊಂಬಾರೆ ಹಾಗೂ ಡಬಲ್ಸ್‌ ಜೋಡಿ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಅವರ ಹೆಸರನ್ನು ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನವೇ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಬೋಪಣ್ಣ ಮತ್ತು ದಿವಿಜ್‌ ಅವರ ಹೆಸರನ್ನು ಟಾಪ್‌ ಯೋಜನೆಗೆ ಸೇರಿಸಲು ಟಾಪ್‌ ಸಮಿತಿ ನಿರ್ಧರಿಸಿತ್ತು.

ಈಗ ದಿವಿಜ್‌ ಮತ್ತು ರೋಹನ್‌ ಅವರು ಡಬಲ್ಸ್‌ ವಿಭಾಗದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಇವರನ್ನು ಟಾಪ್‌ ಯೋಜನೆಯಿಂದ ಕೈಬಿಡುವ ಸಾಧ್ಯತೆ ಇದೆ. ಈ ಸಂಬಂಧ ಸೂಕ್ತ ವಿವರಣೆ ನೀಡುವಂತೆ ಸರ್ಕಾರವು ಎಐಟಿಎಯನ್ನು ಕೇಳಿದೆ. ಈ ವಿಷಯವಾಗಿ ಬೋಪಣ್ಣ ಅವರು ಸ್ಪಷ್ಟನೆ ನೀಡಲಿದ್ದಾರೆ ಎಂದು ಎಐಟಿಎ ಹೇಳಿದೆ.

‘ಏಷ್ಯನ್‌ ಕ್ರೀಡಾಕೂಟಕ್ಕೂ ಮುನ್ನವೇ ಪ್ರಮುಖ ಆಟಗಾರರ ಪಟ್ಟಿಯನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೆವು. ಕ್ರೀಡಾಕೂಟದ ನಂತರ ಈ ಸಂಬಂಧ ಚರ್ಚಿಸಲು ನಮಗೆ ಆಹ್ವಾನ ಬರಬಹುದೆಂಬ ನಿರೀಕ್ಷೆಯಲ್ಲೂ ಇದ್ದೆವು. ಟಾಪ್ ಯೋಜನೆಗೆ ಯಾರನ್ನು ಸೇರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಟಾಪ್‌ ಸಮಿತಿಗೆ ಇದೆ. ಇದರಲ್ಲಿ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ಚಟರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.