ADVERTISEMENT

ಆಕಾಶ್‌ ಚಿಕ್ಟೆ ಮೇಲೆ ಎರಡು ವರ್ಷ ನಿಷೇಧ

ನಿಷೇಧಿತ ಉದ್ದೀಪನಾ ಮದ್ದು ಸೇವನೆ ಪ್ರಕರಣ: ಆರು ಮಂದಿ ಅಮಾನತು

ಪಿಟಿಐ
Published 19 ಅಕ್ಟೋಬರ್ 2018, 18:36 IST
Last Updated 19 ಅಕ್ಟೋಬರ್ 2018, 18:36 IST
ಆಕಾಶ್‌ ಚಿಕ್ಟೆ
ಆಕಾಶ್‌ ಚಿಕ್ಟೆ    

ನವದೆಹಲಿ: ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಆಕಾಶ್‌ ಚಿಕ್ಟೆ ಮೇಲೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಶುಕ್ರವಾರ ಎರಡು ವರ್ಷ ನಿಷೇಧ ಹೇರಿದೆ.

ಕುಸ್ತಿಪಟು ಅಮಿತ್‌, ಕಬಡ್ಡಿ ಆಟಗಾರ ಪ್ರದೀಪ್‌ ಕುಮಾರ್‌, ವೇಟ್‌ಲಿಫ್ಟರ್‌ ನಾರಾಯಣ ಸಿಂಗ್‌, ಅಥ್ಲೀಟ್‌ಗಳಾದ ಸೌರಭ್‌ ಸಿಂಗ್‌, ಬಲಜೀತ್‌ ಕೌರ್‌ ಮತ್ತು ಸಿಮ್ರನ್‌ಜಿತ್‌ ಕೌರ್‌ ಅವರನ್ನು ನಾಲ್ಕು ವರ್ಷ ಅಮಾನತು ಮಾಡಲಾಗಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಹಾಕಿ ಶಿಬಿರದ ವೇಳೆ ಚಿಕ್ಟೆ ಅವರ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸ ಲಾಗಿತ್ತು. ಇದರಲ್ಲಿ ನಿಷೇಧಿತ ನೊರಾಂಡ್ರೊಸ್ಟೆರೋನ್‌ ಮದ್ದಿನ ಅಂಶ ಪತ್ತೆಯಾಗಿತ್ತು. ಹೀಗಾಗಿ ಮಾರ್ಚ್‌ 27ರಿಂದಲೇ ಜಾರಿಯಾಗುವಂತೆ ಚಿಕ್ಟೆ ಮೇಲೆ ತಾತ್ಕಾಲಿಕ ಅಮಾನತು ಹೇರಲಾಗಿತ್ತು. ಅಕ್ಟೋಬರ್ 8ರಂದು ನಡೆದ ಅಂತಿಮ ವಿಚಾರಣೆಯ ವೇಳೆಯೂ ಆಕಾಶ್‌, ತಪ್ಪಿತಸ್ಥ ಎಂಬುದು ಸಾಬೀತಾಗಿರುವ ಕಾರಣ ನಿಷೇಧ ವಿಧಿಸಲಾಗಿದೆ.

ADVERTISEMENT

ಎಡಗಾಲಿನ ಬೆರಳಿಗೆ ಗಾಯವಾಗಿದ್ದ ಕಾರಣ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದೆ. ವೈದ್ಯರು ನೀಡಿದ ಚುಚ್ಚುಮದ್ದು ನಿಷೇಧಿತ ಎಂಬುದು ನನಗೆ ಗೊತ್ತಿರಲಿಲ್ಲ. ಇದು ತಿಳಿಯದೇ ಆದ ಪ್ರಮಾದ ಎಂದು ಚಿಕ್ಟೆ, ವಿಚಾರಣೆಯ ವೇಳೆ ತಿಳಿಸಿದ್ದಾರೆ. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ನಾಲ್ಕರಿಂದ ಎರಡು ವರ್ಷಕ್ಕೆ ತಗ್ಗಿಸಲಾಗಿದೆ.

ಇತರ ಆರು ಮಂದಿ ಕ್ರೀಡಾಪಟುಗಳು, ನಿಷೇಧಿತ ಮದ್ದಿನ ಅಂಶ ತಮ್ಮ ದೇಹಕ್ಕೆ ಹೇಗೆ ಸೇರಿತು ಎಂಬುದರ ಬಗ್ಗೆ ಸೂಕ್ತ ವಿವರಣೆ ನೀಡಲು ವಿಫಲರಾಗಿದ್ದಾರೆ. ಈ ಕಾರಣದಿಂದ ಅವರನ್ನು ನಾಲ್ಕು ವರ್ಷ ಅಮಾನತು ಮಾಡಲಾಗಿದೆ.

ಎಲ್ಲಾ ಕ್ರೀಡಾಪಟುಗಳು ನಾಡಾದ ಕ್ರಮವನ್ನು ಪ್ರಶ್ನಿಸಿ ಮೂರು ವಾರಗಳ ಒಳಗಾಗಿ ಆ್ಯಂಟಿ ಡೋಪಿಂಗ್‌ ಅಪೀಲ್ಸ್‌ ಪ್ಯಾನೆಲ್‌ಗೆ (ಎಡಿಎಪಿ) ಮೇಲ್ಮನವಿ ಸಲ್ಲಿಸಬಹುದಾಗಿದೆ.

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಮತ್ತು ಏಷ್ಯಾಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಚಿಕ್ಟೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.