ADVERTISEMENT

Pro Kabaddi: ಆಲ್‌ರೌಂಡರ್‌ಗಳು ಯಶಸ್ಸಿಗೆ ಕಾರಣ– ಪುಣೇರಿ ಪಲ್ಟನ್‌ ಕೋಚ್‌ ರಮೇಶ್‌

ಪಿಟಿಐ
Published 2 ಮಾರ್ಚ್ 2024, 13:24 IST
Last Updated 2 ಮಾರ್ಚ್ 2024, 13:24 IST
<div class="paragraphs"><p>ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಚಾಂಪಿಯನ್‌ ಆದ ಪುಣೇರಿ ಪಲ್ಟನ್‌ ತಂಡದ ಆಟಗಾರರ ಸಂಭ್ರಮ –ಎಕ್ಸ್‌ ಚಿತ್ರ</p></div>

ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಚಾಂಪಿಯನ್‌ ಆದ ಪುಣೇರಿ ಪಲ್ಟನ್‌ ತಂಡದ ಆಟಗಾರರ ಸಂಭ್ರಮ –ಎಕ್ಸ್‌ ಚಿತ್ರ

   

ಬೆಂಗಳೂರು: ಪುಣೇರಿ ಪಲ್ಟನ್‌, ಹೈದರಾಬಾದಿನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯಲ್ಲಿ ಮೊದಲ ಸಲ ಚಾಂಪಿಯನ್ ಆಗಿದೆ. ಮೂರು ತಿಂಗಳು ಹರಡಿಕೊಂಡಿದ್ದ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದು, ನಂತರ ಫೈನಲ್‌ನಲ್ಲೂ ಅರ್ಹ ಗೆಲುವು ಸಾಧಿಸಿದ ಈ ತಂಡಕ್ಕೆ ತರಬೇತಿ ನೀಡಿದವರು ಕನ್ನಡಿಗ, ಮಾಜಿ ಅಂತರರಾಷ್ಟ್ರೀಯ ಆಟಗಾರ ಬಿ.ಸಿ.ರಮೇಶ್‌.

ಶನಿವಾರ ಬೆಂಗಳೂರಿಗೆ ಹಿಂತಿರುಗಿದ ರಮೇಶ್ ‘ಪ್ರಜಾವಾಣಿ’ ಜೊತೆ ಸಂಭ್ರಮ ಹಂಚಿಕೊಂಡರು. ‘ಆಲ್‌ರೌಂಡ್‌ ಆಟಗಾರರು ನಮ್ಮ ತಂಡದ ಶಕ್ತಿಯಾಗಿದ್ದರು. ಇದರಿಂದ ನಮಗೆ ತಂತ್ರ ರೂಪಿಸುವ ಯೋಚನೆಯಾಗಲಿ, ಒತ್ತಡವಾಗಲಿ ಇರಲಿಲ್ಲ. ನಮ್ಮ ತಂಡ ಯಾರೊಬ್ಬರನ್ನೂ ಬಹುವಾಗಿ ಅವಲಂಬಿಸಿರಲಿಲ್ಲ’ ಎಂದರು.‌

ADVERTISEMENT

‘ತಂಡದ ಆಟಗಾರ, ಇರಾನ್‌ನ ಮೊಹಮ್ಮದ್‌ರೇಝಾ ಶಾಡ್ಲು ಮೂಲತಃ ರಕ್ಷಣಾ ವಿಭಾಗದ ಆಟಗಾರ. ಆದರೆ ಸಮರ್ಥ ರೈಡರ್‌ ಎಂಬುದನ್ನು ಹಾಂಗ್‌ಝೌ ಏಷ್ಯನ್ ಗೇಮ್ಸ್‌ ವೇಳೆ ಗಮನಿಸಿದ್ದೆ. ಆಲ್‌ರೌಂಡ್‌ ಸಾಮರ್ಥ್ಯವನ್ನು ಇಲ್ಲಿ ತೋರಿದರು. ರಕ್ಷಣೆ ವಿಭಾಗದಲ್ಲಿ ತಂಡದ ಶಕ್ತಿಯಾಗಿರುವ ಗೌರವ್‌ ಖತ್ರಿ ಅವರು ಮೂಲತಃ ರೈಡರ್‌ ಆಗಿದ್ದವರು. ಆದರೆ ರೈಟ್‌ ಕಾರ್ನರ್‌ ಡಿಫೆನ್ಸ್‌ನಲ್ಲಿ ಅವರು ಉತ್ತಮವಾಗಿ ಆಡಿ ತೋರಿಸಿದರು. ನಂತರ ಡಿಫೆನ್ಸ್‌ನಲ್ಲಿ ವಹಿಸಿದ ಕೆಲಸವನ್ನು ಚೆನ್ನಾಗಿ ನಿಭಾಯಿಸಿದರು’ ಎಂದು ರಮೇಶ್‌ ಕೆಲವು ಉದಾಹರಣೆಗಳನ್ನು ನೀಡಿದರು. ರೈಡರ್‌ಗಳಾದ ಮೋಹಿತ್‌ ಗೋಯತ್ ಮತ್ತು ನಾಯಕ ಅಸ್ಲಂ ಇನಾಮದಾರ್ ಕೆಲವು ಪಂದ್ಯಗಳಲ್ಲಿ ರಕ್ಷಣೆಯಲ್ಲೂ ಮಿಂಚಿದ್ದು  ಅವರ ಶ್ಲಾಘನೆಗೆ ಪಾತ್ರವಾಗಿತ್ತು.

‘ನಮ್ಮ ತಂಡದ ಬಹುತೇಕ ಆಟಗಾರರು ಸಣ್ಣ ವಯಸ್ಸಿನವರು. ಇನ್ನೂ ಕಲಿಯಬೇಕು. ಚೆನ್ನಾಗಿ ಆಡಬೇಕು ಎಂಬ ತುಡಿತ ಹೊಂದಿದವರು. ಆಟಗಾರರ ಈ ಗುಣ ಖುಷಿ ನೀಡಿತು’ ಎಂದರು.

‘ತಂಡ ಹೆಚ್ಚಿನ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲುತ್ತಿದ್ದುದು ವಿಶ್ವಾಸ ವೃದ್ಧಿಸಲು ಕಾರಣವಾಯಿತು. ರೈಡಿಂಗ್‌, ಟ್ಯಾಕ್ಲಿಂಗ್ ಹೀಗೆ ಎಲ್ಲ ವಿಭಾಗಗಳಲ್ಲಿ ಹೊಂದಾಣಿಕೆಯಿಂದ ಆಡಿದರು. ಸಲಹೆ–ಸೂಚನೆಗಳನ್ನು ಬೇಗನೇ ಗ್ರಹಿಸುತ್ತಿದ್ದರು’ ಎಂದು ಹೇಳಿದರು.

ಲೀಗ್‌ಗೆ ಮೂರು ತಿಂಗಳ ಅವಧಿ ದೊಡ್ಡದು ಎಂಬ ಮಾತನ್ನು ಒಪ್ಪಿಕೊಂಡರು. ಮುಂದಿನ ಆವೃತ್ತಿಯಲ್ಲಿ ಲೀಗ್‌ನ ಅವಧಿ ಕೂಡ ಸ್ವಲ್ಪ ಕಡಿಮೆಯಾಗಬಹುದು ಎಂಬ ಇಂಗಿತ ಅವರ ಮಾತಿನಲ್ಲಿ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.