
ಇಸ್ತಾಂಬುಲ್ (ಪಿಟಿಐ): ವಿಶ್ವ ಒಲಿಂಪಿಕ್ ಗೇಮ್ಸ್ ಕ್ವಾಲಿಫೈಯರ್‌ನಲ್ಲಿ ಭಾನುವಾರ ಭಾರತದ ಕುಸ್ತಿಪಟುಗಳಾದ ಸುಜೀತ್ ಕಲ್ಕಲ್ ಮತ್ತು ಜೈದೀಪ್ ಅಹ್ಲಾವತ್ ಅವರು ತಮ್ಮ ವಿಭಾಗಗಳ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕೋಟಾ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಆದರೆ, ಪುರುಷರ ವಿಭಾಗದಲ್ಲಿ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಮತ್ತು ಹಿರಿಯ ಏಷ್ಯನ್ ಚಾಂಪಿಯನ್‌ಷಿಪ್ ಪ್ರಶಸ್ತಿ ವಿಜೇತ ಅಮನ್ ಅವರು 57 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ 12–2 ರಿಂದ ಉತ್ತರ ಕೊರಿಯಾದ ಚೊಂಗ್ಸಾಂಗ್ ಹಾನ್ ಮಣಿಸಿ ಫೈನಲ್ ಪ್ರವೇಶಿಸಿದರು.
65 ಕೆ.ಜಿ ವಿಭಾಗದ ಕಂಚಿನ ಪದಕ ಸ್ಪರ್ಧೆಯಲ್ಲಿ ಸುಜಿತ್ ಅವರು ಅಮೆರಿಕದ ಜೈನ್ ಅಲೆನ್ ರೆಥರ್ಫೋರ್ಡ್ ವಿರುದ್ಧ ಸೋತರು.
ಜೈದೀಪ್ ಭಾನುವಾರ ಕೂಡ ಕಣದಲ್ಲಿದ್ದರು. ತುರ್ಕಮೆನಿಸ್ತಾನದ ಅರ್ಸ್ಲಾನ್ ಅಮನ್ಮಿರಾಡೋವ್ ವಿರುದ್ಧ ತಮ್ಮ 74 ಕೆ.ಜಿ ರಿಪಿಚೇಜ್ ಸುತ್ತಿನ ಹಣಾಹಣಿಯಲ್ಲಿ ತಾಂತ್ರಿಕವಾಗಿ ಗೆಲುವು ಸಾಧಿಸಿದರು. ಆದಾಗ್ಯೂ, ಅವರು ತವರಿನ ನೆಚ್ಚಿನ ಕುಸ್ತಿಪಟು ಡೆಮಿರ್ಟಾಸ್ ವಿರುದ್ಧ 1-2 ರಿಂದ ಸೋತರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ಆರು ಕುಸ್ತಿಪಟುಗಳು ಅರ್ಹತೆ ಪಡೆದಿದ್ದು, ಈ ಪೈಕಿ ಐದು ಕೋಟಾಗಳು ಮಹಿಳೆಯರಿಗೆ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.