ನವದೆಹಲಿ: ನಿಗದಿಗಿಂತ ಹೆಚ್ಚು ತೂಕ ಹೊಂದಿದ್ದ ಕಾರಣ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಅನರ್ಹಗೊಂಡಿದ್ದ ಅಮನ್ ಸೆಹ್ರಾವತ್ ಅವರನ್ನು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಕುಸ್ತಿ ಸಂಬಂಧಿತ ಚಟುವಟಿಕೆಗಳಿಂದ ಒಂದು ವರ್ಷದವರೆಗೆ ಅಮಾನತುಗೊಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ 22 ವರ್ಷದ ಅಮನ್, ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಭಾರತದ ಪ್ರಮುಖ ಪದಕ ಭರವಸೆಯಾಗಿದ್ದರು. ಆದರೆ, ಸ್ಪರ್ಧೆಯ ದಿನದಂದು ಮಿತಿಗಿಂತ 1.7 ಕೆಜಿ ಹೆಚ್ಚು ತೂಕ ಹೊಂದಿದ್ದ ಕಾರಣ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಈ ಸಂಬಂಧ ವಿವರಣೆ ಕೇಳಿ ಅಮನ್ ಅವರಿಗೆ ಡಬ್ಲ್ಯುಎಫ್‌ಐ ಶೋಕಾಸ್ ನೋಟಿಸ್ ನೀಡಿತ್ತು.
‘ಶೋಕಾಸ್ ನೋಟಿಸ್ ನೀಡಿದ ದಿನಾಂಕದಿಂದ ಜಾರಿಗೆ ಬರುವಂತೆ ಒಂದು ವರ್ಷಗಳ ಅವಧಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಂದ ಅಮನ್ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಫೆಡರೇಷನ್ ತಿಳಿಸಿದೆ.
ಅಮನ್ ಎಸಗಿರುವ ಲೋಪಕ್ಕೆ ವಿವರಣೆ ಕೋರಿ ಸೆ.23ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಸೆ.29ರಂದು ಅವರು ಉತ್ತರ ನೀಡಿದ್ದಾರೆ. ಆದರೆ, ಅದು ‘ತೃಪ್ತಿಕರವಾಗಿಲ್ಲ’ ಎಂದು ಫೆಡರೇಷನ್‌ನ ಶಿಸ್ತು ಸಮಿತಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.