ಬೆಂಗಳೂರು: ಚಂಡೀಗಢದ ಅಂಗದ್ ಚೀಮಾ ಅವರು ಇಲ್ಲಿ ನಡೆದ ₹2 ಕೋಟಿ ಬಹುಮಾನದ ಕಪಿಲ್ ದೇವ್–ಗ್ರಾಂಟ್ ಥಾರ್ನ್‌ಟನ್ ಆಹ್ವಾನಿತ ಗಾಲ್ಫ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ನಗರದ ಹೊರವಲಯದಲ್ಲಿರುವ ಪ್ರೆಸ್ಟೀಜ್ ಗಾಲ್ಫ್‌ಶೈರ್ ಕ್ಲಬ್‌ನಲ್ಲಿ ನಡೆದ ಈ ಕೂಟದ ಕೊನೆಯ ದಿನವಾದ ಶನಿವಾರ ಮೂರನೇ ಸುತ್ತಿನಲ್ಲಿ 66 ಸ್ಕೋರ್ (6 ಅಂಡರ್) ಸಂಪಾದಿಸಿ ತಮ್ಮ ನಾಲ್ಕನೇ ಪ್ರೊ ಪ್ರಶಸ್ತಿಗೆ ಮುತ್ತಿಕ್ಕಿದರು. ಜೊತೆಗೆ ₹30 ಲಕ್ಷ ಬಹುಮಾನ ಮತ್ತು ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಆರ್ಡರ್ ಅಫ್ ಮೆರಿಟ್‌ನಲ್ಲಿ 28ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದರು.
35 ವರ್ಷ ವಯಸ್ಸಿನ ಚೀಮಾ ಅವರು 54 ಹೋಲ್‌ಗಳ ಸ್ಪರ್ಧೆಯಲ್ಲಿ ಒಟ್ಟು 20 ಅಂಡರ್‌ಗಳಲ್ಲಿ 196 (66–64–66) ಸ್ಕೋರ್ ಸಂಪಾದಿಸಿದರು. ಆರಂಭಿಕ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಅವರು, ನಂತರದ ಎರಡು ಸುತ್ತುಗಳಲ್ಲಿ ಅಮೋಘವಾಗಿ ಆಡಿ ಪಿಜಿಟಿಐ ಮುಖ್ಯ ಟೂರ್‌ನಲ್ಲಿ ಎರಡು ಸ್ಟ್ರೋಕ್ ಅಂತರದಲ್ಲಿ ಮೂರನೇ ಜಯ ಸಾಧಿಸಿದರು.
ಎರಡನೇ ಸುತ್ತುಗಳ (65, 67) ಬಳಿಕ ಮೂರನೇ ಸ್ಥಾನದಲ್ಲಿದ್ದ ಬೆಂಗಳೂರಿನ ಕಾಲಿನ್ ಜೋಶಿ ಅವರು ಕೊನೆಯ ಸುತ್ತಿನಲ್ಲಿ 66 ಸ್ಕೋರ್ ಸಂಪಾದಿಸಿದರು. ಒಟ್ಟು 18 ಅಂಡರ್‌ಗಳಲ್ಲಿ 198 ಸ್ಕೋರ್‌ಗಳೊಂದಿಗೆ ರನ್ನರ್ ಅಪ್ ಆದರು.
ಫರೀದಾಬಾದ್‌ನ ಅಭಿನವ್ ಲೋಹನ್ (66-65-70) ಮೂರನೇ ಸ್ಥಾನ ಪಡೆದರು. ಎರಡು ಸುತ್ತುಗಳ ಬಳಿಕ ಎರಡನೇ ಸ್ಥಾನದಲ್ಲಿದ್ದ ಅವರಿಗೆ ಕೊನೆಯ ಸುತ್ತಿನಲ್ಲಿ ಹಿನ್ನಡೆಯಾಯಿತು. ಒಟ್ಟು 15 ಅಂಡರ್‌ಗಳಲ್ಲಿ 201 ಸ್ಕೋರ್ ಗಳಿಸಿದರು.
ಯುವರಾಜ್ ಸಂಧು ಅವರು 204 ಸ್ಕೋರ್‌ನೊಂದಿಗೆ (12 ಅಂಡರ್) ನಾಲ್ಕನೇ ಸ್ಥಾನ ಪಡೆದರು. ಇದರ ಫಲವಾಗಿ ಪಿಜಿಟಿಎ ಆರ್ಡರ್ ಅಫ್ ಮೆರಿಟ್‌ನಲ್ಲಿ ಮೂರನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಏರಿದರು. ಈ ಋತುವಿನ ಅವರ ಗಳಿಕೆ ₹54.67 ಲಕ್ಷಕ್ಕೆ ಏರಿಕೆಯಾಗಿದೆ.
ಬಿಹಾರದ ಅಮನ್ ರಾಜ್ ಅವರು 11 ಅಂಡರ್‌ಗಳಲ್ಲಿ 205 ಸ್ಕೋರ್ ಪಡೆದು ಆರನೇ ಸ್ಥಾನ ಪಡೆದರು. ಅವರು ಕೊನೆಯ ಸುತ್ತಿನಲ್ಲಿ 63 ಸ್ಕೋರ್ ಸಂಪಾದಿಸಿ, ನೋಯ್ಡಾದ ಗೌರವ್ ಪ್ರತಾಪ್ ಸಿಂಗ್ ಮತ್ತು ಸಪ್ತಕ್ ತಲ್ವಾರ್ ಅವರು ಇಲ್ಲಿ ನಿರ್ಮಿಸಿದ್ದ ಕೋರ್ಸ್ ದಾಖಲೆಯನ್ನು ಸರಿಗಟ್ಟಿದರು.
ಕರ್ನಾಟಕದ ಪ್ರಣವಿ ಅರಸ್ ಅವರು ಎಂಟು ಅಂಡರ್‌ಗಳಲ್ಲಿ 208 ಸ್ಕೋರ್‌ಗಳೊಂದಿಗೆ ಜಂಟಿ 18ನೇ ಸ್ಥಾನ ಪಡೆದರು. ಈ ಮೂಲಕ ಮಹಿಳಾ ವೃತ್ತಿಪರರ ಪೈಕಿ ಉತ್ತಮ ಸಾಧನೆ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.