ಗ್ವಾಂಗ್‌ಜು (ದಕ್ಷಿಣ ಕೊರಿಯಾ): ಭಾರತದ ಪುರುಷರ ಕಾಂಪೌಂಡ್ ಆರ್ಚರಿ ತಂಡವು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು, ಚಾರಿತ್ರಿಕ ಸಾಧನೆ ಮೆರೆಯಿತು. ಆದರೆ, ಮಹಿಳಾ ತಂಡವು ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿ ಪದಕ ಗೆಲ್ಲಲು ವಿಫಲವಾಯಿತು.
ಭಾರತದ ರಿಷಭ್ ಯಾದವ್ ಅವರು ಮಿಶ್ರ ತಂಡ ವಿಭಾಗದಲ್ಲಿ ಅನುಭವಿ ಬಿಲ್ಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಅವರೊಂದಿಗೆ ಬೆಳ್ಳಿ ಗೆದ್ದು, ಪದಕ ಡಬಲ್ ಮಾಡಿದರು.
ರಿಷಭ್ ಯಾದವ್, ಅಮನ್ ಸೈನಿ ಮತ್ತು ಪ್ರಥಮೇಶ್ ಫ್ಯೂಗೆ ಅವರನ್ನು ಒಳಗೊಂಡ ಪುರುಷರ ತಂಡವು ಫೈನಲ್‌ನಲ್ಲಿ 235-233ರಿಂದ ಫ್ರಾನ್ಸ್ ಅನ್ನು ಮಣಿಸಿ ರೋಚಕ ಗೆಲುವು ಸಾಧಿಸಿತು.
ನಿಕೋಲಸ್ ಗಿರಾರ್ಡ್, ಜೀನ್ ಫಿಲಿಪ್ ಬೌಲ್ಚ್ ಮತ್ತು ಫ್ರಾಂಕೋಯಿಸ್ ಡುಬೊಯಿಸ್ ಅವರನ್ನು ಒಳಗೊಂಡ ಫ್ರಾನ್ಸ್ ತಂಡ ಪ್ರಬಲ ಸ್ಪರ್ಧೆ ನೀಡಿ ಎರಡು ಪಾಯಿಂಟ್‌ಗಳಿಂದ ಸೋತು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿತು.
ಮೊದಲ ಸುತ್ತಿನಲ್ಲಿ 57–59ರಿಂದ ಹಿನ್ನಡೆ ಅನುಭವಿಸಿದ್ದ ಭಾರತ ತಂಡವು ನಂತರದಲ್ಲಿ ಲಯ ಕಂಡುಕೊಂಡು, ಎರಡನೇ ಸುತ್ತಿನಲ್ಲಿ ಪೂರ್ಣ ಅಂಕ ಗಳಿಸಿ 117 ಸ್ಕೋರ್‌ಗಳೊಂಡನೆ ಸಮಬಲ ಸಾಧಿಸಿತು. ಮೂರನೇ ಸುತ್ತಿನಲ್ಲೂ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿದ್ದರಿಂದ ಸ್ಕೋರ್ 176–176 ಆಯಿತು. ಕೊನೆಯ ಸುತ್ತಿನಲ್ಲಿ ಭಾರತದ ಬಿಲ್ಗಾರರು ನಿಖರ ಗುರಿಯಿಟ್ಟು, ಜಯ ಸಾಧಿಸಿದರು.
‘ಇದು ತಂಡದ ಗೆಲುವು. ಮೂವರು ಬಿಲ್ದಾರರು ಒತ್ತಡವನ್ನು ನಿಭಾಯಿಸಿಕೊಂಡು, ಪರಸ್ಪರ ಸಂಯೋಜನೆಯಿಂದ ಗುರಿಯಿಟ್ಟು ಚಿನ್ನ ಗೆದ್ದರು’ ಎಂದು ತಂಡ ಕೋಚ್ ಜೀವನ್ ಜ್ಯೋತ್ ಸಿಂಗ್ ತೇಜ ಅವರು ಪಿಟಿಐಗೆ ತಿಳಿಸಿದರು.
ಮಿಶ್ರ ತಂಡಕ್ಕೆ ಬೆಳ್ಳಿ: ಇದಕ್ಕೂ ಮುನ್ನ ರಿಷಭ್ ಮತ್ತು ಜ್ಯೋತಿ ಅವರ ತಂಡವು ಫೈನಲ್‌ನಲ್ಲಿ 155–157ರಿಂದ ನೆದರ್ಲೆಂಡ್ಸ್ ತಂಡಕ್ಕೆ ಮಣಿದು, ಬೆಳ್ಳಿ ಪದಕ ಗೆದ್ದರು.
ಮೊದಲ ಸುತ್ತಿನಲ್ಲಿ ಒಂದು ಅಂಕಗಳ ಮುನ್ನಡೆ ಪಡೆದ ಭಾರತ ತಂಡವು ಅದೇ ಲಯವನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಎರಡನೇ ಸುತ್ತಿನ ಬಳಿಕ ಒಂದು ಅಂಕಗಳ ಹಿನ್ನಡೆ ಅನುಭವಿಸಿತು.
ವಿಶ್ವದ ಅಗ್ರಮಾನ್ಯ ಬಿಲ್ಗಾರ ಮೈಕ್ ಸ್ಕ್ಲೋಸರ್ ಮತ್ತು ಸನ್ನೆ ಡಿ ಲಾತ್ ಅವರಿಗೆ ತೀವ್ರ ಸ್ಪರ್ಧೆ ನೀಡಿದ ಭಾರತದ ಜೋಡಿ ಎರಡು ಅಂಕಗಳಿಂದ ಸೋಲೊಪ್ಪಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.