ADVERTISEMENT

ಆರ್ಚರಿ ವಿಶ್ವಕಪ್‌ ಫೈನಲ್‌: ಬಿಲ್ಗಾರ್ತಿ ಜ್ಯೋತಿಗೆ ಚಾರಿತ್ರಿಕ ಕಂಚು

ರಿಷಭ್ ಯಾದವ್‌ಗೆ ನಿರಾಸೆ

ಪಿಟಿಐ
Published 18 ಅಕ್ಟೋಬರ್ 2025, 16:27 IST
Last Updated 18 ಅಕ್ಟೋಬರ್ 2025, 16:27 IST
ಜ್ಯೋತಿ ಸುರೇಖಾ ವೆನ್ನಂ
ಜ್ಯೋತಿ ಸುರೇಖಾ ವೆನ್ನಂ   

ನಾನ್‌ಜಿಂಗ್ (ಚೀನಾ): ಅನುಭವಿ ಜ್ಯೋತಿ ಸುರೇಖಾ ವೆನ್ನಂ ಅವರು ಇಲ್ಲಿ ಶನಿವಾರ ನಡೆದ ಆರ್ಚರಿ ವಿಶ್ವಕಪ್‌ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಚಾರಿತ್ರಿಕ ಕಂಚಿನ ಪದಕ ಗೆದ್ದರು. ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಬಿಲ್ಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಏಷ್ಯನ್ ಗೇಮ್ಸ್ ಹಾಲಿ ಚಾಂಪಿಯನ್‌ ಜ್ಯೋತಿ ಅವರು ಕಂಚಿನ ಪದಕದ ಪ್ಲೇ ಆಫ್‌ ಸುತ್ತಿನಲ್ಲಿ 150-145 ಅಂಕಗಳಿಂದ ಎರಡನೇ ಶ್ರೇಯಾಂಕದ ಎಲ್ಲಾ ಗಿಬ್ಸನ್ (ಬ್ರಿಟನ್‌) ಅವರಿಗೆ ಆಘಾತ ನೀಡಿದರು. 

ಈ ಋತುವಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಇಬ್ಬರು ಸೇರಿ ಒಟ್ಟು ಎಂಟು ಬಿಲ್ಗಾರ್ತಿಯರು ಕಣದಲ್ಲಿದ್ದರು. ಮೂರನೇ ಶ್ರೇಯಾಂಕದ ಜ್ಯೋತಿ, ಕ್ವಾರ್ಟರ್‌ ಫೈನಲ್‌ನಲ್ಲಿ 143–140ರಿಂದ ಅಮೆರಿಕದ ಅಲೆಕ್ಸಿಸ್ ರುಯಿಜ್ ವಿರುದ್ಧ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರು. ಆದರೆ, ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ 143-145ರಿಂದ ಅಗ್ರ ಶ್ರೇಯಾಂಕದ ಆಂಡ್ರಿಯಾ ಬೆಸೆರಾ (ಮೆಕ್ಸಿಕೊ) ಅವರಿಗೆ ಮಣಿದರು.

ADVERTISEMENT

ಚಿನ್ನದ ಪದಕದ ಸುತ್ತಿನಲ್ಲಿ ಮೆಕ್ಸಿಕೊದ ಬಿಲ್ಗಾರ್ತಿಯರಿಬ್ಬರು ಮುಖಾಮುಖಿಯಾದರು. ಐದನೇ ಶ್ರೇಯಾಂಕದ ಮರಿಯಾನಾ ಬರ್ನಾಲ್ ಅವರು ಅಗ್ರ ಶ್ರೇಯಾಂಕದ ಆಂಡ್ರಿಯಾ ಅವರಿಗೆ ಆಘಾತ ನೀಡಿದರು. ಸ್ಪರ್ಧೆಯಲ್ಲಿ ಅವರಿಬ್ಬರೂ ತಲಾ 147 ಅಂಕ ಗಳಿಸಿದರು. ಶೂಟ್‌ ಆಫ್‌ನಲ್ಲಿ ಬರ್ನಾಲ್‌ ಗೆಲುವಿನ ನಗೆ ಬೀರಿದರು.

2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ 29 ವರ್ಷ ವಯಸ್ಸಿನ ಜ್ಯೋತಿ ಅವರಿಗೆ ಇದು ಮೂರನೇ ವಿಶ್ವಕಪ್‌ ಫೈನಲ್‌ ಆಗಿದೆ. ಈ ಹಿಂದೆ ಟ್ಲಾಕ್ಸ್‌ಕಲಾ (2022) ಮತ್ತು ಹರ್ಮೊಸಿಲೊ (2023) ಆವೃತ್ತಿಗಳಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದರು.

ಭಾರತದ ಮತ್ತೊಬ್ಬ ಸ್ಪರ್ಧಿ ಮಧುರಾ ಧಮನ್‌ ಗಾಂವ್ಕರ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ 142-145 ಅಂತರದಲ್ಲಿ ಮರಿಯಾನಾ ಬರ್ನಾಲ್ ಅವರಿಗೆ ಶರಣಾಗಿ ಅಭಿಯಾನ ಮುಗಿಸಿದರು.

ಪುರುಷರಿಗೆ ನಿರಾಸೆ: ಪುರುಷರ ವಿಭಾಗದಲ್ಲಿ ಕಣದಲ್ಲಿದ್ದ ರಿಷಭ್ ಯಾದವ್ ಅವರು ಕಂಚಿನ ಪ್ಲೇ ಆಫ್‌ ಸುತ್ತಿನಲ್ಲಿ ಮುಗ್ಗರಿಸಿದರು. ರಿಷಭ್‌ ಮತ್ತು ನೆದರ್ಲೆಂಡ್ಸ್‌ನ ಮೈಕ್ ಸ್ಕ್ಲೋಸರ್ ಸ್ಪರ್ಧೆಯಲ್ಲಿ ತಲಾ 147 ಅಂಕ ಗಳಿಸಿದ್ದರು. ನಂತರ ಶೂಟ್‌ ಆಫ್‌ನಲ್ಲಿ ಮಾಜಿ ಚಾಂಪಿಯನ್‌ ಮೈಕ್‌ ಗೆಲುವು ಸಾಧಿಸಿದರು.

ಅಭಿಷೇಕ್ ವರ್ಮಾ ಅವರು ವಿಶ್ವಕಪ್ ಫೈನಲ್‌ನ ಕಾಂಪೌಂಡ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಏಕೈಕ ಬಿಲ್ಗಾರನಾಗಿದ್ದಾರೆ. ಅವರು 2015ರಲ್ಲಿ (ಮೆಕ್ಸಿಕೊ‌‌ ಸಿಟಿ) ಬೆಳ್ಳಿ ಮತ್ತು 2018ರಲ್ಲಿ (ಸ್ಯಾಮ್ಸನ್) ಕಂಚಿನ ಪದಕ ಗೆದ್ದಿದ್ದಾರೆ.

ಈ ಋತುವಿನ ವಿಶ್ವಕಪ್ ಫೈನಲ್‌ಗೆ ರಿಕರ್ವ್ ವಿಭಾಗದಲ್ಲಿ  ಭಾರತದ ಯಾವುದೇ ಸ್ಪರ್ಧಿ ಅರ್ಹತೆ ಪಡೆದಿಲ್ಲ.

ಜ್ಯೋತಿ ಸುರೇಖಾ ವೆನ್ನಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.