ಭಾರತ ಮಹಿಳಾ ಹಾಕಿ ತಂಡ
–ಪಿಟಿಐ ಚಿತ್ರ
ನವದೆಹಲಿ: ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅಂತಿಮ ಹಂತದ ಸಿದ್ಧತೆ ನಡೆಸಲು ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು ನೆರೆಯ ಆರ್ಜೆಂಟೀನಾದಲ್ಲಿ ತರಬೇತಿ ನಡೆಸಲಿದೆ ಮತ್ತು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇದರಿಂದ ಅಲ್ಲಿನ ಹವೆಗೆ ಒಗ್ಗಿಕೊಳ್ಳಲು ನೆರವಾಗಲಿದೆ ಎಂದು ಮುಖ್ಯ ಕೋಚ್ ತುಷಾರ್ ಖಾಂಡ್ಕರ್ ಗುರುವಾರ ಇಲ್ಲಿ ತಿಳಿಸಿದರು.
ಜೂನಿಯರ್ ಮಹಿಳಾ ವಿಶ್ವಕಪ್ ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ. ಹಾಕಿ ಇಂಡಿಯಾ ಈಗಾಗಲೇ ತಂಡವನ್ನು ಪ್ರಕಟಿಸಿದೆ.
‘ನಾವು ಚಿಲಿಗೆ ಹೋಗುವ ಮೊದಲು ಆರ್ಜೆಂಟೀನಾದಲ್ಲಿ ತರಬೇತಿ ನಡೆಸಲಿದ್ದೇವೆ ಮತ್ತು ಅಭ್ಯಾಸ ಪಂದ್ಯಗಳನ್ನು ಆಡುತ್ತೇವೆ. ಇದರಿಂದ ನಮಗೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಆಟಗಾರ್ತಿಯರಿಗೆ ಸಾಧ್ಯವಾಗಲಿದೆ’ ಎಂದು ಖಾಂಡ್ಕರ್ ತಿಳಿಸಿದರು.
ಭಾರತ ತಂಡವು, ಜರ್ಮನಿ, ಬೆಲ್ಜಿಯಂ ಮತ್ತು ಕೆನಡಾ ತಂಡಗಳ ಜೊತೆ ‘ಸಿ’ ಗುಂಪಿನಲ್ಲಿದೆ. ಅದು ತನ್ನ ಮೊದಲ ಪಂದ್ಯವನ್ನು ಕೆನಡಾ ವಿರುದ್ಧ ನವೆಂಬರ್ 29ರಂದು ಆಡಲಿದೆ. ಜರ್ಮನಿ ಮತ್ತು ಬೆಲ್ಜಿಯಂ ವಿರುದ್ಧದ ಪಂದ್ಯಗಳು ಕ್ರಮವಾಗಿ ನವೆಂಬರ್ 30 ಮತ್ತು ಡಿಸೆಂಬರ್ 2ರಂದು ನಡೆಯಲಿವೆ.
ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಚಿಲಿ ತಂಡಗಳು ‘ಎ’ ಗುಂಪಿನಲ್ಲಿವೆ. ಆರ್ಜೆಂಟೀನಾ, ಸ್ಪೇನ್, ಜಿಂಬಾಬ್ವೆ ಮತ್ತು ಕೊರಿಯಾ ‘ಬಿ’ ಗುಂಪಿನಲ್ಲಿವೆ. ‘ಡಿ’ ಗುಂಪಿನಲ್ಲಿ ಇಂಗ್ಲೆಂಡ್, ಅಮೆರಿಕ, ನ್ಯೂಜಿಲೆಂಡ್ ಮತ್ತು ಜಪಾನ್ ತಂಡಗಳಿವೆ. ಗುಂಪಿನಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಕ್ವಾರ್ಟರ್‌ಫೈನಲ್ ತಲುಪಲಿವೆ. ಕ್ವಾರ್ಟರ್‌ಫೈನಲ್ ಪಂದ್ಯಗಳು ಡಿಸೆಂಬರ್ 6 ಮತ್ತು 8ರಂದು ನಡೆಯಲಿದ್ದು, ಫೈನಲ್ 10ರಂದು ನಿಗದಿಯಾಗಿದೆ.
ಭಾರತ ಈ ಹಿಂದಿನ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡು ನಾಲ್ಕನೇ ಸ್ಥಾನ ಗಳಿಸಿತ್ತು.
ಭಾರತ ತಂಡವನ್ನು ಪ್ರೀತಿ ಅವರು ಮುನ್ನಡೆಸಲಿದ್ದು, ರುತುಜಾ ದಾಸಾಸೊ ಪಿಸಾಳ ಅವರು ಉಪನಾಯಕಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.