ಲಾಸ್ ವೇಗಸ್: ಫ್ರೀಸ್ಟೈಲ್ ಚೆಸ್ ಗ್ರ್ಯಾನ್‌ಸ್ಲಾಮ್ ಟೂರ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಅವರ ಕನಸಿನ ಓಟವು ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿತು. ಯುವತಾರೆ 0–2 ಅಂತರದಿಂದ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಲೆವೊನ್ ಅರೋನಿಯನ್ ಅವರಿಗೆ ಸೋತರು.
ಫ್ರೀಸ್ಟೈಲ್ ಗ್ರ್ಯಾನ್‌ಸ್ಲಾಮ್‌ನಲ್ಲಿ ಕೊನೆಯ ನಾಲ್ಕರ ಘಟ್ಟ ತಲುಪಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದ 21 ವರ್ಷದ ಅರ್ಜುನ್, ಅಮೆರಿಕದ ಅನುಭವಿ ಆಟಗಾರನ ವಿರುದ್ಧ ಮುಗ್ಗರಿಸಿದರು. ಎರಡು ರ‍್ಯಾಪಿಡ್ ಪಂದ್ಯಗಳನ್ನು ಒಳಗೊಂಡಿದ್ದ ಸೆಮಿಫೈನಲ್‌ನಲ್ಲಿ 42 ವರ್ಷದ ಅರೋನಿಯನ್ ಗೆಲುವು ಸಾಧಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ 1.5– 0.5 ರಿಂದ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು ಮಣಿಸಿದ್ದ ಇರಿಗೇಶಿ, ಸೆಮಿಫೈನಲ್‌ನಲ್ಲಿ ಕಠಿಣ ಪರಿಸ್ಥಿತಿ ಎದುರಿಸಿದರು. ಚಾಣಾಕ್ಷ ನಡೆಯಿಂದ ಮೊದಲ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಅರೋನಿಯನ್ ಅವರಿಗೆ ಫೈನಲ್ ಹಾದಿ ಸುಗಮಗೊಳಿಸಲು ಎರಡನೇ ಪಂದ್ಯ ಡ್ರಾ ಮಾಡಿದ್ದರೆ ಸಾಕಿತ್ತು. ಆ ಪಂದ್ಯವು ಡ್ರಾನತ್ತ ಸಾಗುತ್ತಿರುವಾಗಲೇ ಇರಿಗೇಶಿ ಅವರ ತಪ್ಪು ನಡೆ ಅಮೆರಿಕದ ಆಟಗಾರನಿಗೆ ವರದಾನವಾಯಿತು.
ಮತ್ತೊಂದು ಸೆಮಿಫೈನಲ್‌ನಲ್ಲಿ ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಹ್ಯಾನ್ಸ್ ನೀಮನ್ 2.5–1.5ರಿಂದ ಸ್ವದೇಶದ ಫ್ಯಾಬಿಯಾನೊ ಕರುವಾನ ಅವರಿಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿದರು. 22 ವರ್ಷದ ನೀಮನ್ ಮೊದಲ ಪಂದ್ಯಕ್ಕೆ ಸ್ವಲ್ಪ ತಡವಾಗಿ ಬಂದು, ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಎರಡು ಡ್ರಾ ಪಂದ್ಯಗಳ ಬಳಿಕ ಟೈಬ್ರೇಕರ್‌ನಲ್ಲಿ ನೀಮನ್ ಗೆಲುವು ಸಾಧಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದ ಭಾರತದ ಆರ್. ಪ್ರಜ್ಞಾನಂದ ಅವರು 3ರಿಂದ 8ನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ 1.5-0.5ರಿಂದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರು. ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡ ಪ್ರಜ್ಞಾನಂದ, ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದರು. ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (ನಾರ್ವೆ) ಕೂಡ ಇದೇ ಅಂತರದಲ್ಲಿ ಉಜ್ಬೇಕಿಸ್ತಾನದ ಜಾವೊಕಿರ್ ಸಿಂಧರೋವ್ ವಿರುದ್ಧ ಜಯ ಸಾಧಿಸಿದರು.
ಇತರ ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ 3–1ರಿಂದ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ; ಅಮೆರಿಕದ ಹಿಕಾರು ನಕಾಮುರ 2–0ಯಿಂದ ಸ್ವದೇಶದ ಲೀನಿಯರ್ ಡೊಮಿಂಗೆಝ್ ಪೆರೆಝ್ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.